Friday, October 21, 2011

ಹೀಗೊಂದು ಪುರಾಣ

ಇದೊಂದು ಕೆಲಸ ಇಲ್ಲದವನ ಹರಿಕತೆ ಅಂತಾದ್ರು ಅನ್ನಿ, ಬಾಯಿ ಹರುಕನ ಹರಕು ಪುರಾಣ ಅಂತಾದ್ರು ಅನ್ನಿ. ನಾನು ಮಾತ್ರ ನನ್ನ ಅಭಿಮಾನದ ನುಡಿಮುತ್ತುಗಳನ್ನ ಇವರಿಗೆ ಅರ್ಪಿಸಲೇ ಬೇಕು. ಈಗೀಗ ನನಗೆ ಮನಸಿನಲ್ಲಿ, ಕನಸಿನಲ್ಲಿ, ರಸ್ತೆಯಲ್ಲಿ, ಮನೆಯಲ್ಲಿ, ಕಛೇರಿಯಲ್ಲಿ, ದೇವಸ್ಥಾನದಲ್ಲಿ, ಎಲ್ಲೇ ಹೋದ್ರು ಇವರು ಕಾಣಿಸ್ತಾನೆ ಇರ್ಬೆಕಾದ್ರೆ, ನಿಮ್ಮತ್ರೆ ಇಷ್ಟು ಹಂಚಿಕೊಳ್ಳದಿದ್ರೆ ಹೇಗೆ? ಹಾಗೆ ಇವರೇನು ನಮ್ಮಂತೆ ಸಾಮಾನ್ಯದವರಲ್ಲ. ಇವರ ಮಹಿಮೆಗಳನ್ನು, ಲೀಲೆಗಳನ್ನು ಹಾಗೆಲ್ಲಾ ಒಂದೆರಡು ಮಾತಲ್ಲಿ ವರ್ಣಿಸಿ ಹೇಳಿ ಮುಗಿಸಲಿಕ್ಕು ಆಗುವದಲ್ಲ. ಇವರ ಬಗ್ಗೆ ನೀವೂ ಸ್ವಲ್ಪ ತಿಳದುಕೊಂಡ್ರೆ, ನೀವೂ ನನ್ನ ಹಾಗೆ ಇವರ ಆಭಿಮಾನಿಗಳಾದ್ರೂ ಆಗಬಹುದು! ಯಾರಿಗ್ಗೊತ್ತು? ಹಾಂಗೆ ಭಕ್ತಿಯಿಂದ ಕೇಳ್ತಾಹೋಗಿ!!

ಇವರ ಬಗ್ಗೆ ನನ್ನ ಆಕರ್ಷಣೆ ಇಂದು ನಿನ್ನೆಯದಲ್ಲ. ಇದು ಬಾಲ್ಯದಿಂದ ಬೆಳೆದು ಬಂದ ಪ್ರೀತಿ, ಭೀತಿ ಮತ್ತು ಕಿತಾಪತಿ! ಶಾಲೆಯ ಅಂಗಳದಲ್ಲಿ ಮಲಗಿರುವ ಇವರಿಗೆ ಮೋಜಿಗಾಗಿ ಕಲ್ಲು ಒಗೆದು ಕಾಲು ಕೀಳುವದು, ಇವರ ಮರಿಗಳ ಕದ್ದು ಬೇರೆಲ್ಲೋ ಒಯ್ಯುವಾಗ ಕಚ್ಚಿಸಿಕೊಳ್ಳುವದು, ಇವರುಗಳ ಗುಂಪಿಗೆ ಕಲ್ಲೆಸೆದು ಕುಇ ಕುಇ ಎಂದು ಓಡಿದವರ ಬೆನ್ನುಹತ್ತಿ ಅವರು ಒಮ್ಮೆಲೆ ತಿರುಗಿ ಗುರ್ ಎಂದಾಗ ಜೀವ ಬಾಯಿಗೆ ಬರುವದು, ಬೀದಿಯಲ್ಲಿರುವ ಇವರನ್ನು ಮನೆಯಲ್ಲಿ ಕಟ್ಟಿಹಾಕಲು ಪ್ರಯಾಸ ಪಡವದು,ಎಲ್ಲವೂ ನನ್ನ ಮಧುರ ಅನುಭವಗಳಲ್ಲಿ ದಾಖಲೆಯಾದವು. ಇವರ ಜಗಳ, ಪ್ರೀತಿ, ಸ್ನೇಹ, ಸಕಲ ಗುಣಗಳನ್ನೂ ಅತಿ ಹತ್ತಿರದಿಂದ ನೋಡುವ ಭಾಗ್ಯ ಅಥವಾ ದೌರ್ಭಾಗ್ಯ ಎರಡೂ ನನಗೊದಗಿ ಬಂದಿದ್ದಕ್ಕೆ ನನಗೆ ಅತೀವ ಸಂತೋಷವಿದೆ. ನಾಯಿ, ಕುನ್ನಿ, ಕಜ್ಜಿ ನಾಯಿ,ಕಚ್ಚೋನಾಯಿ, ಹಡಬೆ ನಾಯಿ, ಬೀದಿನಾಯಿ,ನಿಯತ್ತಿನ ನಾಯಿ, ನಾಯಿಬುದ್ದಿ, ಎಂದೆಲ್ಲಾ ಶಬ್ಧಗಳು ಕರ್ಣಪಟಲದ ಮೇಲೆ ಬಿದ್ದೊಡನೆಯೆ ಇವರ ನೆನಪುಗಳು ಫಕ್ಕನೆ ಸಿಡಿದೇಳುತ್ತದೆ. ದಿನವೂ ಒಂದಲ್ಲ ಒಂದು ವಿಷಯಕ್ಕೆ ಇವರು ಎಲ್ಲರ ಬಾಯಲ್ಲೂ ಬರಲೇಬೇಕು ಹಾಗಿದೆ ಇವರ ಮಹಿಮೆ. ಹರಿಕಥೆ ದಾಸರ ಬಾಯಲ್ಲಿ ದತ್ತಾತ್ರೇಯರ ವಾಹನವಾಗಿ ಹೊಗಳಿಸಿಕೊಳ್ಳುವದರಿಂದ ಹಿಡಿದು ರಾತ್ರಿ ಕುಡುಕರ ಬಾಯಲ್ಲಿ ಇನ್ನೊಬ್ಬರ ಜನ್ಮ ಜಾಲಾಡಿಸಲು ಬಳಕೆಯಾಗುವವರೆಗೂ ಇವರು ತಮ್ಮ ಪ್ರಭಾವಲಯವನ್ನು ಸೃಷ್ಟಿಸಿಕೊಂಡಿದ್ದಾರೆ.

ಎಸೆದಿದ್ದೆಲ್ಲಾ ಮೂಸಿನೋಡಿ ಇಷ್ಟವಾದರೆ ಮಾತ್ರ ಕಚ್ಚಿ ತಿನ್ನುವ ಇವರ ಜಗತ್ತು ತುಂಬಾ ಕುತೂಹಲ. ದಾರಿಯಲ್ಲಿ ನಡೆವ ಜನರಿಗೆ ಅವರವರ ಭಾವನೆಗಳಿಗೆ ತಕ್ಕಂತೆ ಕಾಣಿಸುವ ಜೀವಿಗಳು ಉಪದ್ರವಿಗಳು, ನಿರುಪದ್ರವಿಗಳು ಎಂದೆಲ್ಲಾ ಉಪಮಾನಗಳಿಗೆ ಭಾಜನರಾಗುತ್ತಾರೆ. ಹೆದರುವವರಿಗೆ ಹಿಂಬಾಲಿಸಿ ಹೆದರಿಸುತ್ತಾ, ಹೆದರಿಸಿದರೆ ಕುಇಗುಡುತ್ತ ಕಣ್ಮರೆಯಾಗುವ ಪ್ರತಿ ಊರಿನ ದಾದಾಗಳು ಅಧ್ಯಯನಯೋಗ್ಯ ಶೀಲರಾಗಿದ್ದಾರೆಂದರೆ ಅತಿಶಯೋಕ್ತಿಯಲ್ಲ. ಇಂತಿಪ್ಪ ಇವರಿಂದ ಉಪಕಾರ, ಅಪಕಾರ ಹೊಂದದವರೂ ತುಂಬಾ ಕಡಿಮೆ. ರಸ್ತೆಯಲ್ಲಿ ನಡೆಯುವಾಗಲೋ, ರಾತ್ರಿ ಮಲಗಿದಾಗ ಇವರ ಕೂಗಿಗೆ ನಿದ್ರೆ ಬಾರದೆಲೋ, ಪರಿತಪಿಸುವವರು, ಶಪಿಸುವವರು, ಎಲ್ಲ ಕಡೆಯೂ ಸಿಗುತ್ತಾರೆ. ಹಗಲು ಕಂಡೋಡನೆ ಬಾಲ ಅಲ್ಲಾಡಿಸಿ ತಿಂಡಿಗಿಟ್ಟಿಸುವ ಇವರು, ರಾತ್ರಿಯಾಗುತ್ತಲೆ ಎಲ್ಲರನ್ನೂ ಕಳ್ಳರೆಂದೆ ಭಾವಿಸಿ ಬೆನ್ನುಬೀಳುವದು ಇವರ ಕರ್ತವ್ಯವೆಂದೇ ಭಾವಿಸಿ, ಶಿರಸಾ ಪಾಲಿಸುತ್ತಾರೆ. ಇವರ ವಾಸಸ್ಥಳಗಳೂ ಇವರಂತೆ ವಿಚಿತ್ರವಾಗಿ ಇರುತ್ತದೆ. ಮನೆಗಳ ಆವರಣದ ಗೋಡೆ ಬದಿ, ಮರಳು ರಾಶಿ, ಮನೆಯ ಹೊರಬಾಗಿಲ ಮುಂಬಾಗ, ರಸ್ತೆಯ ಬದಿ, ರಸ್ತೆ ಕೊನೆ ಹೀಗೆ ಎಲ್ಲೆಂದರಲ್ಲಿ ವಾಸಿಸಿ, ಗಬ್ಬು ನಾತ ಬರುತ್ತಲೇ ವಾಸಸ್ತಾನವನ್ನು ಬದಲಿಸುವ ಚಾಕಚಕ್ಯತೆ ಹುಟ್ಟಿನಿಂದಲೂ ಇವರಿಗೆ ಕರಗತವಾಗಿದೆ. ಆವರು ನಿಂತ, ಕುಂತ, ಮಲಗಿದ ಜಾಗಗಳೆಲ್ಲ ಅವರ ಸ್ವಂತದ್ದಾಗಿ, ಮತ್ಯಾರದರೂ ಆಕ್ರಮಣ ಮಾಡಲು ಮುಂದಾದರೆ ಅವರಿಗೆ ಎಚ್ಚರಿಕೆ ಕೊಡುವ ಪದ್ದತಿ ಇವರಲ್ಲಿದೆ. ಊರಿನ ಕಂಬಗಳು, ಗಿಡಗಂಟಿಗಳು, ಮರಗಳು ಸ್ವಂತದೆಂಬಂತೆ ಗುರುತುಮಾಡುವ ಕಲೆಯನ್ನು ತಲತಲಾಂತರದಿಂದ ಇವರು ಸಿದ್ದಿಸಿಕೊಂಡಿದ್ದಾರೆ. ತಮ್ಮದೆ ಆದ ಪಡೆಯನ್ನು ಕಟ್ಟಿಕೊಂಡು ತಮ್ಮ ಕ್ಷೇತ್ರಗಳಲ್ಲೆಲ್ಲಾ ಗಸ್ತು ತಿರುಗುತ್ತ ತಮ್ಮ ಸಾಮ್ರಾಜ್ಯವನ್ನು ಪರರ ಆಕ್ರಮಣದಿಂದ ಇವರು ರಕ್ಷಿಸಿಕೊಳ್ಳುತ್ತಾರೆ.

ಇವರ ಬಗ್ಗೆ ಅತೀವ ಆಕರ್ಷಣೆಯೇ ನನಗೆ ಹಲವಾರು ಪಾಠಗಳನ್ನು, ಅನುಭವಗಳನ್ನೂ ನೀಡಿದೆ. ಬೀದಿಯಲ್ಲಿ ಅಮ್ಮನೊಡನೆ ಒಡಾಡಿಕೊಂಡಿದ್ದ ಇವರನ್ನು ಪ್ರೀತಿಯಿಂದ ಮನೆಗೆ ತಂದರೆ, ನನ್ನನ್ನು ಬಹಳ ತೊಂದರೆಗೆ ನೂಕುತ್ತಿದ್ದರು. ಕೊಟ್ಟದ್ದು ತಿನ್ನದೆ ಒಳಗೆ ಕೂಡಿಟ್ಟಿದ್ದನ್ನು ತಿಂದು, ಅಲ್ಲಿ ಇಲ್ಲಿ, ಹೇಸಿಗೆ ಮಾಡಿ, ದೊಡ್ಡವರಿಂದ ತಾವು ಬಡಿಸಿ ಕೊಳ್ಳುವದಲ್ಲದೆ ನನಗೂ ಸರಿಸಮನಾದ ಪಾಲು ಸಿಗುವಂತೆ ಮಾಡುತ್ತಿದ್ದರು. ಒಮ್ಮೆಮ್ಮೆ ತಿನ್ನುವದಕ್ಕೆ ಏನು ಸಿಗದಿದ್ದರೆ ಹೊರಗಿಟ್ಟ ಚಪ್ಪಲಿ, ಬಟ್ಟೆಗಳನ್ನೆ ಹರಿದು ತಮ್ಮ ಸಾತ್ವಿಕ ಕೋಪವನ್ನು ಪ್ರದರ್ಶಿಸುತ್ತಿದ್ದರು. ತಮಗೆಂದೇ ಇಟ್ಟ ಗೋಣಿಚೀಲದಲಿ ಮಲಗದೆ, ಜಗುಲಿಯಲ್ಲಿ ಮಲಗಿರುವವರ ಹಾಸಿಗೆಯಲ್ಲಿ, ಕತ್ತಲಲ್ಲಿ ನಿಧಾನವಾಗಿ ಸೇರಿ ರಾಜರಂತೆ ನಿದ್ರಿಸುತ್ತಿದ್ದರು. ಹೀಗೆ ಅತಿ ಸುಂದರವಾಗಿ ಬೆಳೆದು ಯೌವನ ಪ್ರಾಪ್ತಿಯಾಗುತ್ತಲೆ ಸಂಗಾತಿ ಹುಡುಕಿಕೊಂಡು ಮನೆ ಬಿಟ್ಟರೆ ವಾರಹದಿನೈದು ದಿನಕ್ಕೊಮ್ಮೆ ದರ್ಶನವನ್ನು ಕೊಡುತ್ತಿದರು. ಹೀಗೆ ಒಮ್ಮೆಮ್ಮೆ ಬಂದವರು ತಮ್ಮ ಸಂಗಡಿಗರೆನ್ನಲ್ಲಾ ಕರೆದು ದೋಂಬಿ ಮಾಡಿ ಮನೆಯವರ ಧರ್ಮದೇಟಿಗೆ ಮತ್ತೆ ಮನೆ ಬಿಡುತ್ತಿದ್ದರು. ಹೀಗೆ ಇವರು ಮನೆ ಕಡೆ ಬರುವದು ಕಡಿಮೆಯಾದ ಮೇಲೆ ಮತ್ತೆ ಬೇರೊಬ್ಬರನ್ನು ಹುಡುಕಿ ತಂದಿಟ್ಟುಕೊಳ್ಳುವದು ನಮಗೆ ಅನಿವಾರ್ಯವಾಗುತ್ತಿತ್ತು.

ಓಮ್ಮೆ ಇವರು ನಮ್ಮ ತರಗತಿಯೊಳಗೆ ಬಂದು ಅವಾಂತರ ಸೃಷ್ಟಿಸಿದ್ದನ್ನು ಮರೆಯಲಾಗುವುದಿಲ್ಲ. ಮಧ್ಯಾಹ್ನದ ಊಟ ಮಾಡಿಕೊಂಡು ಬಂದ ನಮ್ಮ ಜೊತೆ, ಇವರಲೊಬ್ಬರು ತರಗತಿ ಸೇರಿಕೊಂಡು ಹೊರ ಹೋಗುವ ಮನಸ್ಸು ಮಾಡದೆ ಅಲ್ಲೆ ಅಡಗಿ ಕುಳಿತುಕೊಂಡು ಬಿಟ್ಟರು. ಶಿಕ್ಷಕರು ಬಂದು ಭೂಗೋಳದ ವಿವಿಧ ಹವಾಗುಣಗಳನ್ನು ವರ್ಣಿಸಲು ಶುರುವಾಗಿ ಹತ್ತು ನಿಮಿಷ ಕಳೆಯುವದರ ಒಳಗೆ, ಅರ್ಧ ಕ್ಲಾಸು ಅರೆನಿದ್ರೆಯಲ್ಲಿ ಕನಸು ಕಾಣುತಿತ್ತು. ಉಳಿದವರು ತಮ್ಮದೆ ಆದ ಇನ್ನಿತರ ಚಟುವಟಿಕೆಗಳಲ್ಲಿ ಮಗ್ನರಾಗಿದ್ದರು. ನಮ್ಮ ಜೊತೆ ಒಳಬಂದು ಮಲಗಿಕೊಂಡವರಿಗೆ ಪಾಠ ಬೇಜಾರಾಯ್ತೆಂದು ಕಾಣುತ್ತದೆ. ಬೇಜಾರಾದರು ಸುಮ್ಮನೆ ಕೂತುಗೊಳ್ಳುವ ಜಾಯಮಾನದವರಲ್ಲ ಇವರು. ಸ್ವಲ್ಪ ಹೂತ್ತು ನೋಡಿ, ಆಮೇಲೆ ಇದ್ದಕ್ಕಿದ್ದಂತೆ ಮೇಲೆ ನೋಡುತ್ತಾ ದೊಡ್ಡದನಿಯಲ್ಲಿ ಶೃತಿಯ ಸಹಾಯವಿಲ್ಲದೆ ಸಂಗೀತದ ಆಲಾಪವನ್ನು ಪ್ರಾರಂಭಿಸಿದರು. ಇದ್ದಕ್ಕಿದ್ದಂತೆ ಸಮಾಜಶಾಸ್ತ್ರದಲ್ಲಿ ಆಲಾಪನೆಯ ಸದ್ದು ಕೇಳಿ ಎಚ್ಚರವಿದ್ದವರು ಸ್ವಲ್ಪಹೊತ್ತು ಆಚೀಚೆ ನೊಡಿ ತಡೆಯಲಾಗದೆ, ಕಿಸಕ್ಕನೆ ನಗೆಯನ್ನು ಹೊರಚೆಲ್ಲ ತೊಡಗಿದರು. ನಿದ್ರೆಯಲ್ಲಿದ್ದವರು ದಡಬಡಾಯಿಸಿ ಸಾವರಿಸಿಕೊಂಡು ಮಾಸ್ತರ್ ಯಾವುದೋ ಜೋಕ್ ಹೇಳಿರಬಹುದೆಂದು ಗೃಹಿಸಿ, ಗಹಗಹಿಸಿ ನಗತ್ತಾ ಆಮೇಲೆ ಕಣ್ಣಲ್ಲೆ ಪಕ್ಕದವರನ್ನು ವಿಚಾರಿಸತೊಡಗಿದರು. ಇದುವರೆಗೂ ಸಮಾಜದಲ್ಲಿ (ಕ್ಲಾಸಿನಲ್ಲಿ), ನಗುವದು ನಿಶಿದ್ದ ಎನ್ನುವಂತೆ ಪಾಠಮಾಡುತ್ತಿದ್ದ ಶಿಕ್ಷಕರು, ಇಂದೇನು ತಿಂದು ಬಂದಿರಬಹುದೆಂಬ ಶಂಕೆ ಹಲವರಲ್ಲಿ ಮೂಡತೊಡಗಿತು. ಹೆಣ್ಣು ಮಕ್ಕಳೆಡೆಗೆ ಗಮನ ಹರಿಸಿದ್ದ ಕೆಲವು ಹುಡುಗರು, ಅವರು ನಕ್ಕಿದ್ದು ನೋಡಿ, ನಗದಿದ್ದರೆ ದಡ್ದತನದ ಪ್ರದರ್ಶನವಾಗುವೆದೆಂದು ತಿಳಿದು ನಗೆಯನ್ನು ಇನ್ನೂ ಜೋರಾಗಿಸಿದರು. ತಮ್ಮಪಾಡಿಗೆ ಹವಾಗುಣವನ್ನು ವಿವರಿಸುತ್ತಿದ್ದ ಶಿಕ್ಷಕರು ಕ್ಲಾಸಿನ ಗಂಭೀರ ಹವಾ ಬದಲಾದದ್ದು ಕಂಡು, ಯಾವುದೋ ಹುಡುಗನ ಕಿತಾಪತಿಯೆಂದೇ ತಿಳಿದು ಸರಕ್ಕನೆ ಮೇಜಿನ ಮೇಲಿನ ಬೆತ್ತವನ್ನು ಕೈಗೆತ್ತಿಕೊಂಡರು. ಒಮ್ಮೆಲೇ ಶಿಕ್ಷಕರು ಬೆತ್ತ ಎತ್ತಿದ್ದು ನೋಡಿ, ಇದು ಮಾಸ್ತರ್ ಜೋಕ್ ಅಲ್ಲವೆಂದು ಫಕ್ಕನೆ ಗೃಹಿಸಿ ಬಾಯಿಮುಚ್ಚಿಕೊಂಡು ಬಿಟ್ಟರು. ಆದರೆ ಅಡಗಿಕೊಂಡಿದ್ದ ಮಹಾನುಭಾವರು ಮಾತ್ರ ತಮ್ಮ ಆಲಾಪನೆ ನಿಲ್ಲಿಸುವ ಮನಸು ಮಾಡಲಿಲ್ಲ. ಮಹಾನುಭಾವರ ಸಂಗೀತದ ಜ್ನಾನವಿದ್ದ ಕೆಲವರು, ಹುಶ್, ಹುಶ್ ಎಂದು ಕೂಗುತ್ತಾ ಶಬ್ಧಬಂದೆಡೆಗೆ ಹಣಕಿ, ಇಣುಕಿ ನೋಡಿದರು. ಶಿಕ್ಷಕರು ತಮ್ಮ ಅಪಾರ ಅನುಭವವನ್ನೆಲ್ಲಾ ಓರೆಗೆ ಹಚ್ಚಿ, ಇದು ಹೊರಗಡೆಯಿಂದ ಬಂದ ವಿದ್ವಾಂಸರದೆ ಎಂದು ಮನಗಂಡು ಶಾಂತಚಿತ್ತರಾದರು. ಆದರೂ ತಮ್ಮ ಸಮಾಜದ ಬಗೆಗಿನ (ಪಾಠದ) ಕರ್ತವ್ಯವನ್ನು ನೆನೆದು, ಉದ್ಭವಿಸಿದ ಸಮಸ್ಯೆಯನ್ನು ಪರಿಹರಿಸಲು, ಹಾವಿನ ಮೇಲೆ ಮಲಗಿದ ಮಹಾವಿಷ್ಣು, ರಾಕ್ಷಸರ ಸಂಹಾರಕ್ಕೆ ಭುವಿಗಿಳಿದಂತೆ, ಶಿಕ್ಷಕರು, ವಿಧ್ಯಾರ್ಥಿಗಳ ಜ್ನಾನದಾಹವನ್ನು ತಣಿಸಲು ತೊಂದರೆಯಿತ್ತ ಸಂಗೀತ ವಿದ್ವಾಂಸರ ಸಂಹಾರಕ್ಕೆ ಬೆತ್ತ ಹಿಡಿದು ಧಾವಿಸಿದರು. ಏಕಲವ್ಯನು ಸಾಧಿಸಿದ ಶಬ್ಧವೇಧಿ ವಿದ್ಯೆಯನ್ನೂ ನಾಚಿಸುವಂತೆ, ಶಬ್ಧ ಬಂದೆಡೆಗೆ ಹೋಗಿ ಬೆತ್ತ ಬೀಸಿದರು. ಇದುವರೆಗೂ ನಾದಸ್ವರಗಳನ್ನು ಏಕಾಗ್ರತೆಯಿಂದ ಹಾಡುತ್ತಿದ್ದ ವಿದ್ವಾಂಸರು ಅನಿರೀಕ್ಷಿತ ಆಕ್ರಮಣದಿಂದ ಒಮ್ಮೆಲೆ ದೇಹದ ಬಗ್ಗೆ ಪರಿವೆ ಹೊಂದಿ, ಪೆಟ್ಟು ತಾಗಿವದರೊಳಗೆ, ಕುಯಕ್ ಎಂದು ಶಬ್ಧ ಹೊರಡಿಸಿ ಕ್ಲಾಸಿನ ಹುಡುಗಿಯರೆಡೆಗೆ ನೆಗೆದು ಬಿಟ್ಟರು. ತಮ್ಮ ಬೆತ್ತಕೆ ಸಿಗದೆ ತಪ್ಪಿಸಿಕೊಂಡಿದ್ದು ನೋಡಿ, ಮಹಾಭಾರತ ಯುದ್ದದಲ್ಲಿ ಕರ್ಣನಿಗೆ, ಅರ್ಜುನನಿಗೆ ಬಿಟ್ಟ ಸರ್ಪಾಸ್ತ್ರ ತಪ್ಪಿಹೋದಾಗ, ಆದಷ್ಟು ನಿರಾಸೆಯಾಯಿತು. ಆದರೂ ಧೃತಿಗೆಡದೆ ಮುನ್ನುಗ್ಗಿ ಮತ್ತೊಮ್ಮೆ ಬಾರಿಸಲು ಹೋದ ಶಿಕ್ಷಕರ ಬೆತ್ತ ಡೆಸ್ಕಿನ ಕಾಲುಗಳಿಗೆ ತಾಗಿ ಲಟಕ್ಕನೆ ಮುರಿದು ಬಿತ್ತು. ರಥ ಮುರಿದರೂ ಅಭಿಮನ್ಯು ನೆಲದಲಿ ನಿಂತು ರಥದ ಚಕ್ರದಲಿ ಹೋರಾಡಿದ ಹಾಗೆ, ಶಿಕ್ಷಕರು ಕೈಯಲ್ಲಿ ಉಳಿದ ಬೆತ್ತವನ್ನ್ನು ಝಳಪಿಸುತ್ತಾ ವಿದ್ವಾಂಸರೆಡೆಗೆ ಏರಿ ಹೋದರು. ಹುಡುಗಿಯರೆಡೆಗೆ ಧಾವಿಸಿದ್ದ ಮಹಾನುಭಾವರು ಅಲ್ಲಿಯೂ ತಮ್ಮ ದೇಹ ಪ್ರತಾಪ ತೋರಿಸಿ ಅವರು ಜೋರಾಗಿ ಕಿರುಚುವಂತೆ ಮಾಡಿಬಿಟ್ಟರು. ಇದುವರೆಗೂ ಸುಮ್ಮನೆ ಶಿಕ್ಷಕರ ಶೌರ್ಯ ಪ್ರದರ್ಶನವನ್ನು ನೋಡುತ್ತಿದ್ದ ಕೆಲ ಹುಡುಗರು, ಹುಡುಗಿಯರು ಕಿರುಚಿದೊಡನೆ, ಮಲ್ಲಯುದ್ಧದಲಿ ಗೆದ್ದು ರಾಜಕುಮಾರಿಯ ವರಿಸಲು ಸಜ್ಜಾದ ರಾಜಕುಮಾರರಂತೆ ಯುದ್ಧೋನ್ಮಾದದಿಂದ ವಿದ್ವಾಂಸರೆಡೆಗೆ ಧಾವಿಸಿದರು. ಒಮ್ಮೆಲೇ ಶತ್ರುಗಳು, ರಕ್ತಬೀಜಾಸುರನ ಸೈನ್ಯದಂತೆ ಇಮ್ಮಡಿ, ಮುಮ್ಮಡಿಯಾಗಿದ್ದು ಕಂಡು, ಇದುವರೆಗೂ ಗರುಡಧ್ವಜದಂತೆ ಮೇಲೆ ಹಾರುತ್ತಿದ್ದ ವಿದ್ವಾಂಸರ ಬಾಲ, ಮುದುಡಿ ಹಿಂಗಾಲುಗಳ ಸಂದಿ ಸೇರಿತು. ಆದರೂ ಪ್ರಯತ್ನ ಬಿಡದೆ, ಧೂರ್ಯೋದನ ಅಡಗಲು ಸರೋವರದ ನೀರನ್ನು ಅಶ್ರಯಿಸದಂತೆ, ಇವರು ಹುಡುಗಿಯರ ಡೆಸ್ಕಿನ ಕೆಳಗೆ ಸೇರಿದರು. ಹುಡುಗಿಯರ ಚೀರಾಟ, ನೂಕಾಟದಿಂದ ಉತ್ತೇಜಿತರಾದ ಶಿಕ್ಷಕರು ಛಲ ಬಿಡದೆ ಸೈನ್ಯದೊಡನೆ ಮುನ್ನುಗ್ಗಿ ವಿದ್ವಾಂಸರನ್ನು ಹುಡುಕಿ, ಹುಡುಕಿ, ಶಸ್ತ್ರ ಬೀಸತೊಡಗಿದರು. ವಿದ್ವಾಂಸರು ನಾಜೂಕಾಗಿ ಎಲ್ಲ ಶಸ್ತ್ರಗಳಿಂದ ತಪ್ಪಿಸಿಕೊಳ್ಳುತ್ತ, ಒಂದು ಡೆಸ್ಕಿನ ಆಡಿಯಿಂದ ಇನ್ನೊಂದಕ್ಕೆ ನಡೆಯುತ್ತಾ ಹುಡುಗಿಯರಲ್ಲಿ ಮತ್ತಷ್ಟು ಭಯಹುಟ್ಟಿಸಿ ಅವರ ಆಕ್ರಂದನದ ಕೂಗು ಇಡೀ ಶಾಲೆಯನ್ನು ಸುತ್ತುವರಿದು ಮುಖ್ಯಶಿಕ್ಷಕರ ಕಿವಿಯವರೆಗೂ ಮುಟ್ಟಿವ ಹಾಗೆ ಮಾಡಿದರು.ಹುಡುಗರೆಷ್ಟೇ ಕೂಗಿದರು ಮಧ್ಯಾಹ್ನದ ನಿದ್ರಾದೇವಿಯ ಅಪ್ಪುಗೆಯಿಂದ ಹೊರಬಾರದಿದ್ದ ಮುಖ್ಯಶಿಕ್ಷಕರು, ದ್ರೌಪದಿಯ ಕೂಗಿಗೆ ಶ್ರೀಕೃಷ್ಣ ದ್ವಾರಕೆಯಿಂದ ಬಂದಹಾಗೆ, ಹುಡುಗಿಯರ ಕೂಗಿಗೆ ಕ್ಲಾಸಿನಬಾಗಿಲಲ್ಲಿ ಪ್ರತ್ಯಕ್ಷರಾಗಿ ಬಿಟ್ಟರು. ವಿದ್ವಾಂಸರು ಹಾಗು ಶಿಕ್ಷಕರ ಸೈನ್ಯದ ರಾಜಿಸೂತ್ರವಾಗಿ, ಮುಖ್ಯರು ವಿದ್ವಾಂಸರನ್ನು ಗೌರವವಾಗಿ ಹೊರಹೋಗಲು ಅನುವಾಗುವಂತೆ, ಸೈನ್ಯವನ್ನು ಹಿಂಬದಿಗೆ ಅಟ್ಟಿ, ಬಾಗಿಲನ್ನು ಮುಕ್ತಗೊಳಿಸಿ, ಶಸ್ತ್ರ ಝಳಪಿಸುವಂತೆ ಸೂಚಿಸಿದರು. ಹೀಗೆ ಬೇರೆಲ್ಲೂ ದಾರಿಕಾಣದೆ ವಿದ್ವಾಂಸರು, ಮುಖ್ಯರಿಗೆ ಒಂದು ಕೃತಜ್ನತೆಯನ್ನೂ ಹೇಳದೆ, ಮುಖವನ್ನು ಸಹ ತೋರದೆ, ಬೀಸೊದೊಣ್ಣೆಯಿಂದ ತಪ್ಪಿದರೆ ಜೀವನಪೂರ್ತಿ ಎಲ್ಲಿಯದರೂ ಬಿದ್ದಿದ್ದು ಅಥವಾ ಕದ್ದು ತಿನ್ನಬಹುದೆಂದು ಸುತ್ತಮುತ್ತ ನೋಡದೆ ಕಣ್ಮರೆಯಾದರು.

ಬಾಲ್ಯವನೆಲ್ಲಾ ಮುಗಿಸಿ ಯೌವನಬಂದರೂ ಇವರ ಬಗೆಗಿನ ನನ್ನ ಪ್ರೀತಿ ಸ್ವಲ್ಪವೂ ಕಡಿಮೆಯಾಗಲಿಲ್ಲ. ಒಮ್ಮೆಮ್ಮೆ ನನ್ನ ವಯಸ್ಸಿನ ಹುಡುಗಿಯರೆಲ್ಲ ಇವರನ್ನು ಮುದ್ದಾಡುತ್ತಿರುವಾಗ ಸ್ವಲ್ಪ ಈರ್ಷ್ಯೆ ಬಂದಿದ್ದಿದೆ. ಆದರೆ ಅವರನ್ನು ಮನೆಗೆ ಸೇರಿಸದೆ ಮತ್ತೆ ಬೀದಿಯಲ್ಲೆ ಬಿಟ್ಟಾಗ, ಹುಡುಗಿಯರ ಪ್ರೀತಿಯ ಬಗೆಗೆ ಪಾಠ ಕಲಿತಂತೆ ಭಾಸವಾಗಿದೆ. ಅವರ ಪ್ರೀತಿಯ ನೆನೆದು ಬೀದಿ ತುಂಬಾ ರಾತ್ರಿಯಲ್ಲಾ ನಿದ್ರೆ ಬರದೆ ವಿರಹಿಗಳಂತೆ ಪ್ರಲಾಪಿಸುತ್ತಾ ,ಇವರು ಬೀದಿ ಸುತ್ತುವದನ್ನು ನೋಡಿ ಮರುಕ ಪಟ್ಟಿದ್ದೇನೆ. ಹುಡುಗಿ ಕೈಕೊಟ್ಟರೆ ನಾಯಿಬಾಳು, ಬಾಲೆಯ ಪ್ರೀತಿ ಬಾಳಿಗೆ ಫಚೀತಿ, ಎಂಬೆಲ್ಲಾ ಹೊಸಗಾದೆ ನನ್ನಲ್ಲಿ ಉದ್ಭವಿಸಿ ಹುಡುಗಿಯರ ಬಗ್ಗೆ ಅತಿ ಎಚ್ಚರದಿಂದ ಇರುವಂತೆ ಪ್ರೇರೇಪಿಸಿದ್ದಾರೆ. ನಡುಬೀದಿಯಲ್ಲಿ ಬೇಕಾದರೂ, ತಮ್ಮ ಚಾಕಚಕ್ಯತೆಯನ್ನು ತೋರಿಸಿ ಹುಡುಗರಿಗೆ, ಯುವಕರಿಗೆ, ಉಚಿತ ಲೈಂಗಿಕ ಶಿಕ್ಷಣದ ಪಾಠವನ್ನು ತಕ್ಕಮಟ್ಟಿಗೆ ಕಲಿಸುತ್ತಾ ಗುರುವಾಗಿದ್ದಾರೆ. ಇಷ್ಟೊಂದು ಪಾಠ ಕಲಿಸುವ ಗುರುವಾದರು, ಎಷ್ಟೊಂದು ಕಷ್ಟ ನಷ್ಟಗಳನ್ನು ಅನುಭವಿಸಿದರು, ತುಂಬಿದ ಕೊಡ ತುಳುಕುವುದಿಲ್ಲ ಎನ್ನುವ ಹಾಗೆ ಒಂದಿಷ್ಟು ಹಮ್ಮು ಬಿಮ್ಮು ಇಲ್ಲದೆ, ತಮ್ಮ ಎಂದಿನ ದೈನ್ಯ ಮುಖವನ್ನು ಹೊತ್ತು ಊಟ ತಿಂಡಿಯ ಸಮಯಕ್ಕೆ ಸರಿಯಾಗಿ ಮನೆ ಮುಂದೆ ಹಾಜಾರಾಗಿ ಸಮಯ ಪಾಲನೆಯ ಮಹತ್ವವನ್ನೂ ನಮಗೆ ತಿಳಿಸುತ್ತಾರೆ. ನಂಬಿಕೆಗೆ ಅನ್ವರ್ಥವಾಗಿರುವ ತಮ್ಮ ಗುಣವನ್ನು ಹೆಸರನ್ನು ತಲತಲಾಂತರದಿಂದ ಉಳಿಸಿಕೊಂಡು ಬಂದಿರುವ ಇವರು , ಇಂದಿನ ರಾಜಕಾರಣಿಗಳ ಯುಗದಲ್ಲೂ ಇದನ್ನು ಉಳಿಸಿ ಬೆಳೆಸಿಕೊಂಡು ಹೊಗುತ್ತಿರವದು ನಮ್ಮ ಪೂರ್ವಪುಣ್ಯದ ಫಲವೇ ಇರಬಹುದು.

ಇವರ ಬಗ್ಗೆ ನನ್ನ ಗೌರವ ಇನ್ನೂ ಹೆಚ್ಚಾದದ್ದು ನನ್ನ ಮದುವೆಯ ನಂತರ ಎನ್ನಬಹುದು. ಮದುವೆಯಾಗಿ ಮೂರ್ನಾಲ್ಕು ತಿಂಗಳು ಕಳೆದಿರಬಹುದಷ್ಟೆ. ನನ್ನ ಹೆಂಡತಿಗೆ ಮನೆಯಲ್ಲಿ ಬೇಜಾರಾಗುವ ಕಾರಣ ವಾಯುವಿಹಾರವೆನ್ನುತ್ತಾ ಹೊರಗೆ ಅಡ್ಡಾಡುವದನ್ನು ರೂಢಿಸಿಕೊಂಡಿದ್ದಳು. ತನ್ನ ತತ್ಸಮಾನವಾಗಿ ಬೇರೆಯವರ ಬಗ್ಗೆ ವಿಶ್ಲೇಷಿಸುವ ಸದ್ಗುಣ ಹೊಂದಿದ ಕೆಲವು ಸ್ನೇಹಿತೆಯರ ಜೊತೆ ಹೋಗಿಬರುತ್ತಿದ್ದ ಇವಳು, ಅದೊಂದು ದಿನ ಅವರೆನ್ನೆಲ್ಲಾ ಬಿಟ್ಟು ನನ್ನನ್ನು ಜೊತೆಗೆ ಕರೆದೊಯ್ಯುಲು ತೀರ್ಮಾನಿಸಿದಳು. ಅವಳು ತಿರ್ಮಾನಿಸಿದ್ದರಿಂದ ದಿನ ಅವಳ ಜೊತೆ ಹೋಗುವದು ಅನಿವಾರ್ಯವಾಯಿತು. ನಡೆಯುತ್ತ ನಾವು ಹೀಗೆ ಸ್ವಲ್ಪ ದೂರ ಹೋಗುವಷ್ಟರಲ್ಲಿ ಎರಡು ಅಡಿ ಅಂತರವನ್ನು ಕಾಯ್ದು ಕೊಂಡು ಬರುತ್ತಿದ್ದ ನನ್ನವಳು ಫಕ್ಕನೆ ಬಳಿ ಬಂದು ಕೈಹಿಡಿದು ಕೂಗಿಕೊಂಡಳು. ಅನಿರೀಕ್ಷಿತ ವಿದ್ಯಮಾನದಿಂದ ಅವಾಕ್ಕಾದ ನಾನು ಆವಳ ಭಯದ ಮುಖವನ್ನು ನೋಡಿ, ಸುತ್ತಮುತ್ತ ಅವಳಲ್ಲ್ಲಿ ಭಯೋತ್ಪಾದಿಸಿದವರನ್ನು ರೋಮಾಂಚಿತನಾಗಿ ಹುಡುಕತೊಡಗಿದೆ. ಇದುವರೆಗೂ ನನಗೆ ಸಾಧ್ಯವಾಗದ ಕೆಲಸವನ್ನು ಸಾಧಿಸಿ ತೋರಿಸಿದ ಸಿದ್ಧ ಪುರುಷರ ದರ್ಶನಕ್ಕೆ ನನ್ನ ಕಣ್ಗಳು, ಮನಸು ಕಾತರದಿಂದ ಹುಡುಕುತ್ತಿದ್ದವು. ಇವಳು ಹಚ್, ಹಚ್ ಎನ್ನುತ್ತ ನನ್ನನ್ನು ಮತ್ತೂ ಬಿಗಿಯಾಗಿ ಹಿಡಿದು ಸುತ್ತುವರಿಯತೊಡಗಿದಳು. ಅವಳ ಹಿಂದೆ ನೋಡಿದರೆ ಸಿದ್ದ ಪುರುಷರು ಇವರೆ. ಅದೂ ಇಬ್ಬರೂ. ನಮ್ಮ ತೀರಾ ಸಮೀಪಕ್ಕೆ ತಮ್ಮದೇನೋ ನಿಗೂಢ ಕಾರ್ಯಾಚರಣೆಯ ಉದ್ದೇಶಕ್ಕಾಗಿ ಬಂದುಬಿಟ್ಟಿದ್ದರು. ಅನತಿ ದೂರದಲ್ಲೆ ಸಿದ್ಧರ ದೊಡ್ಡ ತಂಡವೇ ಬೀಡುಬಿಟ್ಟು ನಮ್ಮನ್ನು, ಸಂನ್ಯಾಸಿಗಳು ಸಂಸಾರಿಗಳನ್ನು ನಿರ್ಲಿಪ್ತತೆಯ ಮುಖದಿಂದ ಕಿರುನಗೆ ಬೀರಿ ಗಮನಿಸುವಂತೆ ನೋಡುತ್ತಿದ್ದವು. ಸತಿ ಸಾವಿತ್ರಿಯು ಯಮನಿಂದ ತನ್ನ ಗಂಡನ ಪ್ರಾಣ ಕಾಪಾಡಿದಂತೆ, ಸಾಧುಸಿದ್ದರ ಪಟಾಲಂನಿಂದ ನನ್ನ ಸತಿಯನ್ನು ಕಾಪಾಡಿಕೊಳ್ಳುವ ಹೊಣೆಗಾರಿಕೆಯ ನನ್ನ ಮೇಲೆ ಬಿದ್ದಾಗಿತ್ತು. ಯಾವುದೆ ಕ್ಷಣದಲ್ಲಿ ಬೇಕಾದರೂ ಯಾವುದಕ್ಕಾದರೂ ಸಿದ್ದವಿದ್ದ, ಏಳೆಂಟು ಸಂಖ್ಯೆಯಲ್ಲಿದ್ದ ಸಿದ್ಧರ ಸೈನ್ಯದೊಡನೆ ಏಕಾಂಗಿಯಾಗಿ ಹೋರಾಡಬೇಕಾದ ಪರಿಸ್ಥಿತಿ. ಅದರಲ್ಲೂ ನನ್ನನ್ನೇ ನಂಬಿ ಬಂದ ಪತ್ನಿಯನ್ನು ಉಳಿಸಿಕೊಳ್ಳುವ ಹೋರಾಟ. ಪತ್ನಿಯ ಎದುರು ವೀರಾವೇಶ ಪ್ರದರ್ಶಿಸಲು ಸಿಗುವ ಅತಿವಿರಳ ಅವಕಾಶವನ್ನ್ನು ಯಥೇಚ್ಛವಾಗಿ ಬಳಸಿಕೊಳ್ಳಬೇಕೆಂದು ನಿರ್ಧರಿಸಿ ನಿಶ್ಯಸ್ತ್ರನಾಗಿದ್ದ ನಾನು ಆಯುಧವೇನಾದರೂ ಸಿಗಬಹುದೆಂದು ಅಕ್ಕಪಕ್ಕ ಹುಡುಕಾಡಿದೆ. ಯುದ್ದಕಾಲದಲ್ಲಿ ಶಸ್ತ್ರಹುಡುಕಿದ ನನಗೆ, ಎಲ್ಲಿಯೂ ಏನೂ ಸಿಗದಾಯಿತು. ಏನು ಮಾಡಬೇಕೆಂದು ತಿಳಿಯದ ನಾನು ಸುಮ್ಮನೆ ನಿಂತಿದ್ದು ನೋಡಿ ನನ್ನ ಸತಿ ಗಾಬರಿಯಾಗಿ ನನ್ನ ಕೈಹಿಡಿದುಕೊಂಡು ಪಲಾಯನದ ದಾರಿ ತೋರಲು ಹೊರಟಳು. ಆಗ ನಾನು, ಕೌರವ ಸೈನ್ಯಕ್ಕೆ ಹೆದರಿ ಓಡುತ್ತಿದ್ದ ಉತ್ತರಕುಮಾರನನ್ನು ಅರ್ಜುನನನು ಗಟ್ಟಿಯಾಗಿ ಹಿಡಿದು ನಿಲ್ಲಿಸಿದಂತೆ, ಇವಳನ್ನು ಹಿಡಿದು ಯುದ್ಧರಂಗಕ್ಕೆ ಬೆನ್ನು ತಿರುಗಿಸಿ ಓಡದೆ ಸುಮ್ಮನೆ ನಿಂತುಕೊಳ್ಳುವಂತೆ ಗದರಿದೆ. ಅದುವರೆಗೂ ನಾನು ಗದರಿದರೆ ಮಹಿಷಾಸುರನನ್ನು ಮರ್ದಿಸಿದ ಚಾಮುಂಡಿಯ ಅವತಾರ ತಾಳುತ್ತಿದ್ದ ಇವಳು ಈಗ್ಯಾಕೊ ಸುಮ್ಮನೆ ನನ್ನ ಹಿಂದೆ ಅವಿತು ನಿಂತುಕೊಂಡಳು. ಯುದ್ಧರಂಗದಲಿ ಶಸ್ತ್ರಾಸ್ತ್ರಗಳನ್ನು ಬಿಸುಟು ನಿಂತಂತೆ ನಿಂತಿದ್ದ ನಮ್ಮನ್ನು ತಪಾಸಿಸುವಂತೆ ಮೂಸಿನೋಡಿದ ಸಿದ್ಧರ ಕಟ್ಟಾಳುಗಳು, ಮತ್ತೊಂದೆಡೆಗೆ ಮತ್ತೇನೋ ಅನ್ವೇಷಣೆಗೆ ತೆರಳಿದರು. ಇದುವರೆಗೂ ಜೀವವನ್ನು ನನ್ನ ಕೈಯಲ್ಲಿಟ್ಟು ಅಡಗಿಕೊಂಡಿದ್ದ ಹೆಂಡತಿ, ಈಗ ಸ್ವಲ್ಪ ಧೈರ್ಯ ಬಂದು, ಮುಂದೆ ನಡೆದು ನನ್ನ ಕೈ ಬಿಟ್ಟಳು! ಹೀಗೆ ನನ್ನ ಆಪಾರ ಬುದ್ಧಿಶಕ್ತಿಯಿಂದ ಅವಳನ್ನು, ಸಿದ್ಧರ ಸೈನ್ಯದ ಆಕ್ರಮಣದಿಂದ ಕಾಪಾಡಿದವನಾಗಿಯೂ, ನಡುಬೀದಿಯಲ್ಲಿ ಹೆಂಡತಿಯನ್ನು ಗದರಿದ ಗಂಡನಾಗಿಯೂ, ರಕ್ತಪಾತಗಳಿಲ್ಲದೆ ಸಂಭಾವ್ಯ ಯುದ್ಧವನ್ನು ತಡೆದ ಶಾಂತಿದೂತನಾಗಿಯೂ, ನಾನು ಏಕಕಾಲದಲ್ಲಿ ದಿನ ವಿಜೃಂಬಿಸಿದೆ.

ನನಗೆ ದಿನವೂ ಇವರ ನೆನಪು ಒತ್ತರಿಸಿಕೊಂಡು ಬರಲು ಇನ್ನೂ ಒಂದು ಕಾರಣವಿದೆ. ನನ್ನ ಮೇಲಧಿಕಾರಿಗಳೊಬ್ಬರಿಗೆ ಇವರು ತುಂಬಾ ಹತ್ತಿರದ ಸಂಬಂಧಿಗಳೆಂದು ಕಾಣುತ್ತದೆ. ತಮ್ಮ ಸಂಬಂಧಿಕರಿಂದ ಸ್ಪೂರ್ತಿ ಪಡೆದ ಇವರು ನಮ್ಮ ಮೇಲೆ ವಿನಾಕಾರಣ ತಮ್ಮ ಉಗ್ರಪ್ರತಾಪವನ್ನು ತೋರುತ್ತಿರುತ್ತಾರೆ. ಬೆಳಿಗ್ಗೆ ಬಂದೊಡನೆ ಹಲ್ಲುಕಿರಿಯುವದರಿಂದ ಹಿಡಿದು ಸಂಜೆ ಕಾಲ್ಕಿತ್ತು ಓಡಿಹೋಗುವವರೆಗೂ ಇವರದು ಥೇಟ್ ಅದೇ ಶೈಲಿ! ಇವರು ಯಾವುದಾದರು ವಿಷಯವನ್ನು ಗುರ್ ಎನ್ನದೆ ಮಾತಾಡಿಬಿಟ್ಟರೆ ನಮ್ಮ ಕಛೇರಿಯ ಅದೆಷ್ಟೋ ಅಸಂತೃಪ್ತ ಆತ್ಮಗಳಿಗೆ ಮೋಕ್ಷ ಸಿಕ್ಕುವದು ಏಕದಂ ಗ್ಯಾರಂಟಿ ಎಂಬುದು ನಮ್ಮ ಕಛೇರಿಯಲ್ಲಿ ಮೊದಲಿಂದಲೂ ಸುತ್ತುತ್ತಿರುವ ಹೊಸಗಾದೆ. ಇವರು ಯಾವುದಾದರೂ ವಿಷಯಕ್ಕೆ ಒಳಕರೆಸಿ ಹೆಚ್ಚು ಕಚ್ಚಿದರೆಂದರೆ ಮರುದಿನದಿಂದ ಎರಡು ದಿವಸ ಅವರದು ರಜೆ ಎಂದೇ ಲೆಕ್ಕ. ಹೀಗಾಗಿ ಯಾರಾದರು ರಜೆ ಹಾಕಿದರೆ ಇವರಿಂದ ಕಚ್ಚಿಸಿಕೊಂಡು ಸುಧಾರಿಸಿ ಕೊಳ್ಳುತಿರಬಹುದೆಂದು ಅವರನ್ನು ದೂರವಾಣಿಯ ಮುಖಾಂತರ ವಿಚಾರಿಸಿಕೊಳ್ಳಲಾಗುತ್ತಿತ್ತು. ಇಂಥಹ ಉತ್ತಮ ಮೇಲಧಿಕಾರಿಗಳು, ಈಗೊಂದು ತಿಂಗಳ ಹಿಂದೆ ಎರಡು ದಿನ ರಜೆ ಹಾಕಿದ್ದರು. ಇಂಥಹ ಉತ್ತಮರಿಗೆ ಅದ್ಯಾವ ಪ್ರಾರಬ್ಧ ಕರ್ಮ ಈಗ ಅಂಟಿಕೊಂಡಿತೆಂದು ಕಚೇರಿಯ ಎಲ್ಲರಿಗೂ ಅನುಮಾನ ಸುಳಿಯುತ್ತಿತ್ತು. ಎರಡು ದಿನಗಳಾದ ಮೇಲೆ ಕುಂಟುತ್ತ ಬಂದ ಸಾಹೇಬರ ಆರೋಗ್ಯ ವಿಚಾರಿಸಲಾಗಿ, ಸಾಹೇಬರಿಗೆ ಅವರ ಸಂಬಂಧಿಗಳೇ ಆದ ಇವರೊಲ್ಲೊಬ್ಬರು ಅತೀ ಆತ್ಮೀಯವಾಗಿ ಕುಶಲೋಪರಿ ವಿಚಾರಿಸದರೆಂದು ತಿಳಿದು ಇಡೀ ಕಛೇರಿ ಮೌನವಾಗಿಯೇ ಸಂಭೃಮಿಸಿತು. ಆದರೂ ವಿಷಯ ಕೇಳಿ ಸಂತೃಪ್ತರಾಗದ ಕೆಲವರು ಪೂರ್ಣ ವೃತ್ತಾಂತಕ್ಕಾಗಿ ಬೇಡಿಕೆಯಿಟ್ಟು ಸಾಹೇಬರ ಸಹನೆ ಪರೀಕ್ಷಿಸ ಹೊರಟರು. ನಮ್ಮ ಸಾಹೇಬರು ಯಾವುದೋ ಕಾರ್ಯನಿಮಿತ್ತ ರಾತ್ರಿವೇಳೆ ಮನೆಮುಂದಿನ ರಸ್ತೆಯಲ್ಲಿ ನಡೆಯುತ್ತಿದ್ದಾಗ ಅವರ ಸಂಬಂಧಿಗಳಲ್ಲೊಬ್ಬರ ಬಾಲವನ್ನು ಅತೀ ಜಾಗರೂಕತೆಯಿಂದ ಮೆಟ್ಟಿಬಿಟ್ಟರು. ಸಂಬಂಧಿಗೆ ಇವರು ನಮ್ಮವರಲೊಬ್ಬರೇ ಎಂದು ತಿಳಿಯುವಷ್ಟರಲ್ಲಿ ಅವರ ಬಾಯಿಯಲ್ಲಿದ್ದ ಹಲ್ಲು ಇವರ ಕಾಲನ್ನು ಗಟ್ಟಿಯಾಗಿ ಹಿಡಿದುಬಿಟ್ಟಿತ್ತು. ಗುರ್ತುಸಿಗದೇ ಕಾಲಿಗೆ ಗುರ್ತಿಸಿದ ಪರಿಣಾಮವನ್ನೆದುರಿಸಿದರು. ಮೈಸೂರು ದಸರಾದ ಮುಷ್ಟಿಯುದ್ಧದಲ್ಲಿ ಜಗಜಟ್ಟಿಗಳು ರಪ್ ರಪ್ ಎಂದು ಕೈಬೀಸಿದಂತೆ ಬೀಸಿದ ಸಾಹೇಬರ ಹೊಡೆತಕ್ಕೆ ಸಂಬಂಧಿಕರು ಎದ್ದೆನೋ ಬಿದ್ದೆನೋ ಎಂದು ಬಾಲ ಎಲ್ಲಿದೆ ಎನ್ನುವದನ್ನೂ ಲಕ್ಷಿಸದೆ ಚೀರಾಡುತ್ತಾ ದೂರ ಓಡಿಹೋದರು. ಪಾಪ ಸಾಹೇಬರು, ಸಂಬಂಧಿಕರ ಪ್ರೀತಿಗೆ, ವೈದ್ಯರಿಗೆ ಬೆಲೆಕಟ್ಟಿ, ಸವಿನೆನಪನ್ನು ಮೆಲಕು ಹಾಕುತ್ತಾ ಎರಡು ದಿನ ಮನೆಯಲ್ಲೆ ಮಲಗಿಕೊಂಡಿದ್ದರು. ಅವರಿಗೆ ಸಂಬಂಧಿಕರೆ ಆದರೂ, ನಮಗೆಲ್ಲರಿಗೂ ಎರಡು ದಿನ ಆನಂದದಿಂದಿರುವಂತೆ ಅನುಗ್ರಹಿಸಿದಕ್ಕೆ ಎಲ್ಲರೂ ತುಂಬು ಹೃದಯದ ಕೃತಜ್ನತೆ ಸಲ್ಲಿಸಿದೆವು.

ಈಗ ನಾನು ನಿಮಗೆ ಇಷ್ಟೆಲ್ಲಾ ಕಚ್ಚಿದ್ದರ ಕಾರಣ ತಿಳಿಯುತ್ತಿರಬಹುದು! ಇಷ್ಟೆಲ್ಲಾ ಪ್ರೀತಿ, ಅನುಭವಗಳನ್ನು ಒಡಲ್ಲಲ್ಲಿಟ್ಟುಕೊಂಡು ಸುಮ್ಮನೆ ಇರುವುದು ಅಸಾಧ್ಯ! ಇವರ ಬಗ್ಗೆ ನನ್ನಲ್ಲಿ ಪ್ರೀತಿ, ಅಭಿಮಾನ, ದಿನೆ ದಿನೆ ಬೆಳೆಯುತ್ತಿರುವದನ್ನು ನೋಡಿದ ಮನೆಯವಳು, ಸ್ನೇಹಿತರೆಲ್ಲಾ ಈಗಾಗಲೆ ನನಗೆ ಒಳ್ಳೆ ಕಡೆ ತಕ್ಕವ್ಯವಸ್ತೆ ಮಾಡಲು ಹೊರಟಿದ್ದಕ್ಕೆ ನನಗೆ ಖೇದವಿದೆ. ಇವರ ಮಹಿಮೆಯನು ಹುಲುಮಾನವರೇನು ಅರಿವರು! ಲೋಕಕ್ಕೆಲ್ಲಾ ಹೆಂಡತಿಯನ್ನು ಅಡವಿಡಬಹುದೆಂದು ತೋರಿಸಿದ ಧರ್ಮರಾಯನಿಗೇ ಇವರು ಮೋಕ್ಷದ ದಾರಿ ತೋರಿಸಿದವರು. ನನ್ನಂತಹ ಇವರ ಕಟ್ಟಾ ಅಭಿಮಾನಿಗೆ ಇವರು ಮೋಕ್ಷದ ಹಾದಿ ತೋರಿಸುವದರಲ್ಲಿ ನನಗಂತು ಸಂಶಯವಿಲ್ಲ.

ಇಂಥ ಮಹಾನುಭಾವರ ಮಹಿಮೆಯ ಅರಿಯದ ಹುಲು ಮನುಜಗೆ ಇಲ್ಲಂತೂ ಸುಖವಿಲ್ಲ, ಅಲ್ಲೇನೋ ಗೊತ್ತಿಲ್ಲ!!