Saturday, January 1, 2011

ಇದುವೇ ಆಧುನಿಕತೆ!!


ನವವರುಷವೆಂದು ನವೋಲ್ಲಾಸದ ಕೂಗು
ಮಸಣದೆಡೆ ನಡೆವಂತೆ ಮೆರವಣಿಗೆ,
ವಿಕಾರ ಚೀತ್ಕಾರ, ಹೆಂಡ ತುಂಡಿನ ಸತ್ಕಾರ
ಇದುವೇ ನವವರುಷದ ಸಂಭೃಮದ ಬಗೆ

ಕಣ್ಣುಕುಕ್ಕಿಸಿ ಝಗಮಗಿಸುವ ಬೆಳಕ ಚೆಲ್ಲಾಟ
ಗುನುಗುವ, ತೂರಾಡುವ, ಕುಡುಕರ ಓಡಾಟ
ಮತ್ತೇರಿ ಬಾಯ್ಬಡಿಯುತಿಹ ಕಾಮುಕರ ದಂಡು
ಹೆಂಗಸರು, ಗಂಡಸರು, ಇಲ್ಲೆಲ್ಲರೂ ಒಂದು!!

ಕುಡಿದರೇನೆ ಪ್ರಗತಿಯೆಂದು ಬೊಬ್ಬಿಡುವ ಜನರು
ಧರ್ಮವನು, ಮೌಲ್ಯವನು, ಬಿಟ್ಟವರೆಲ್ಲ ಪ್ರಗತಿಪರರು
ಸ್ವಂತಿಕೆಯಿಲ್ಲ, ಪರರ ನಂಬುವದಿಲ್ಲ
ತುಂಡುಡುಗೆ, ಹಾದರ, ಯಾವುದೂ ಅಸಭ್ಯವೇ ಅಲ್ಲ!!

ದೇಶ ಮುನ್ನಡೆಯಬೇಕು, ನಾವೂ ಸಾಧಿಸಬೇಕು,
ನಮಗಿತ್ತ ಸ್ವಾತಂತ್ರ್ಯವ ಅನುಭವಿಸಲೇಬೇಕು
ಇದುವೇ ಪ್ರಗತಿ, ಇದುವೇ ಆಧುನಿಕತೆ,
ಅನೈತಿಕತೆಯೇ ಮುಂದುವರಿವ ನಾಗರೀಕತೆ!!!

Thursday, December 23, 2010

ಆಹಾ ಏನು ಚಳಿ!


ಅಹಾ ಈದೇನು ಮೈ ಕೊರೆಯುವ ಚಳಿ
ಹಿಮಾಲಯದ ತಣ್ಣೀರ ಮೈಗೆರೆಚಿದ ಪರಿ
ತನುವೆಲ್ಲಾ ಗಡಗಡನೆ ನಡುಗುತಿದೆ
ಹಾಸಿಗೆಯಲ್ಲೇ ಮುದುಡಿ ಮಲಗುವಂತಾಗಿದೆ

ಬಾನಿಂದ ಭುವಿಗೆ ಬೀಳುತಿಹ ದಟ್ಟ ಮಂಜು
ಪಳಪಳ ಹೊಳೆವ ಕಿರಣಗಳ ಮೋಜು
ಚಿಟಿಪಿಟಿ ಜಿನುಗುತಿಹ ರಸ್ತೆಯಂಚಿನ ಮರ
ಓ ಚಳಿಯೇ, ಇದೆಲ್ಲ ನೀ ನಮಗಿತ್ತ ವರ.

ಸುಯ್ ಎನ್ನುತ ಬೀಸುತಿದೆ ನಿನ್ನ ಹೊತ್ತ ಗಾಳಿ
ಕೆರಳುತಿದೆ ಮನಸು ನಿನ್ನ ರೂಪವ ನೋಡಿ
ತಬ್ಬಿ ಏಕೆ ಪೀಡಿಸುತಿಹೆ ಬಿಡು ನನ್ನನ್ನು
ನಲ್ಲೆ ಬರುತಿಹಳು, ಹೋಗಿ, ನಾಳೆ ಬಾ ಇನ್ನು

ಏನು ವರ್ಣಿಸಲಿ ನಿನ್ನ ಓ ಚಳಿಯೆ ,
ಕಂಬಳಿಯ ನೆನಪ, ಪದೆಪದೆ ತರುತಿಹೆ,
ಬಿಸಿ ಏರಿಸುವ ಮನಸ ಮೂಡಿಸುತಿಹೆ,
ಪ್ರಿಯತಮೆಯ ಬಂಧನಕೆ ದಿನವೆಲ್ಲಾ ದೂಡುತಿಹೆ.

ಪ್ರಾರ್ಥಿಸುವೆ ಓ ಚಳಿಯೆ,ನೀ ನನ್ನ ಜೊತೆಗಿರು
ಕಾಲವನು ದಾಟಿ ನೀ ಎಲ್ಲು ಹೊಗದಿರು,
ಗೊಗರೆವೆ ನಾ ನಿನಗೆ, ನೀ ಅಭಯವ ನೀಡು,
ಓ ಚಳಿಯೇ ನೀ, ನಾ ಕರೆದಾಗ ಬಂದುಬಿಡು,

Wednesday, December 22, 2010

ಹೆಂಡತಿಯ ನಗುವ ಬಯಸಿ

ಹೆಂಡತಿಗೆ ತುಸು ಮುನಿಸು ಮೂಡಲು
ತಕ್ಷಣ ಅದನು ಶಮನಗೊಳಿಸಲೇಕೆ,
ಮುದ್ದು ಮುಖದಲ್ಲೆಲ್ಲಾ ಕೆಂಪು ಆವರಿಸಲು
ಇಮ್ಮಡಿಸಿದ ಸೌಂದರ್ಯವ ಸವಿಯಬಾರದೇಕೆ

ಪ್ರೀತಿಯ ನೋಟಕೆ ಹೆಂಡತಿ ತುಸು ನಾಚಲು
ಮುಖ ಹಿಗ್ಗಿಸಿ ಬೀಗುವದೇಕೆ,
ನಾಚಿಕೆಯ ಮುಖಕ್ಕೆ ಕನ್ನಡಿಯ ತೋರಿ
ಕನ್ನಡಿಯನೇ ನಾಚಿಸಬಾರದೇಕೆ

ಹೆಂಡತಿ ಸುಮ್ಮನೆ ಗದರುತಲಿರಲು
ಮುಖವ ಗಂಟಿಕ್ಕಿ ಕೋಪಿಸುವದೇಕೆ
ಕೋಮಲ ಧ್ವನಿಯ ಇಂಪ ಆಲಿಸಿ
ಮುತ್ತುದುರುತೆಂದು ಕರೆದು ತೋರಬಾರದೇಕೆ

ಮನೆಗೆಲಸದಲಿ ಹೆಂಡತಿ ಸಹಾಯ ಬಯಸಲು
ತಾತ್ಸಾರದಲಿ ಅವಳನು ದೂರುವದೇಕೆ
ಸಹನೆಯಲಿ ಅವಳ ಮಾತನು ಪಾಲಸಿ
ಆಯಾಸವೆಂದು ಮಡಿಲಲಿ ಮಲಗಬಾರದೇಕೆ.

ಒಲವಿನ ಹೆಂಡತಿ ಮೌನವಾಗಿರಲು
ಏನಾಗಿ ಹೋಯ್ತೆಂದು ಹಳಹಳಿಸಲೇಕೆ
ನಮ್ಮ ದನಿಯನೂ ಮೌನವಾಗಿಸಿ
ಅವಳ ನೋವಿಗೆ ಸ್ಪಂದಿಸಬಾರದೇಕೆ.

ಹೇಗಿದ್ದರೂ, ಏನಿದ್ದರೂ, ಅವಳ ನಗುವ ಬಯಸಿ,
ಪ್ರತಿಕ್ಷಣವೂ ಅವಳ ಪ್ರೀತಿಸಬಾರದೇಕೆ.....

Thursday, December 16, 2010

ಕನವರಿಕೆ


ನೀನೆಂತ ಪ್ರೀತಿಯ ನೀಡುತಿಹೆಯೇ ಗೆಳತಿ
ಜಗ ಕಾಣದಾಗಿದೆ,
ಯೋಚನೆ ಬರಿದಾಗಿದೆ,
ಅದೇನು ನೀ ಪ್ರೀತಿಸುವ ರೀತಿ,
ಗುರಿಯ ದಾರಿ ಮಸುಕಾಗಿದೆ
ಜೀವ ತಂಪಾಗಿ ಹೋಗಿದೆ

ಮನವ ಬಿಚ್ಚಿದರಲ್ಲಿ, ಸಿಗುವುದೇ
ನಿನ್ನ ಯೋಚನೆಯ ಕಂತೆ,
ನಾಡಿಗಳೆಲೆಲ್ಲ ರಕ್ತ ಹರಿಯುವುದೇ
ನಿನ್ನ ಪ್ರೀತಿಯಾ ಜೊತೆ.
ತಾಳಲಾರೆನು ನಾನು,
ನಾ ಹೊಟ್ಟೆ ತುಂಬಿದ ಜೇನು,
ನಿನ್ನ ಪ್ರೀತಿಯ ಮಧುವಲಿ
ನಾ ಸಿಕ್ಕಿ ಹಾರದಾದೆನು.

ಕಳೆಯುವೆನೆಂದರೂ ನಾ ಹೇಗೆ
ಕಳೆಯಲಿ ಈ ಬಂಧವನು
ತೊರೆಯುವೆನೆನೆಂದರೂ ನಾ ಹೇಗೆ
ತೊರೆಯಲಿ ನನ್ನದೇ ಜೀವವನು
ಬಂಧಿಸಿದೆ, ನರಳಿಸಿದೆ,ಮೋಹವ ಬೆಳೆಸಿದೆ,
ಮುಳುಗಿಸಿದೆ, ತೇಲಿಸಿದೆ, ನನಗೂ
ಪ್ರೀತಿಯ ಸಾಗರದಲಿ ಈಜುವದ ಕಲಿಸಿದೆ.....
ನಾನ್ಯಾರೆಂಬುದೇ ನನಗೆ ಮರೆತು ಹೋಗಿದೆ....

Wednesday, October 20, 2010

ಪ್ರೀತಿ ಬೇಡುವ ಬಗೆ

ಬೆಲೆಬಾಳುವ ಒಡವೆ ತೊಟ್ಟು
ಬಣ್ಣಬಣ್ಣದ ಮಾತುಕೊಟ್ಟು
ಪ್ರೀತಿಯನ್ನು ಬೇಡಿದರೆ
ಹುಡುಗಿ ಪ್ರೀತಿಸುವಳೇ!
ಪ್ರೀತಿಯಲ್ಲೇ ಮನಸನಿಟ್ಟು,
ಮುಗ್ಧ ಮನಸನ್ನಡವಿಟ್ಟು
ಒಲವಿನ ಭಿಕ್ಷೆ ಬೇಡಿದರೆ
ನಲ್ಲೆ ಒಲ್ಲೆ ಎನ್ನುವಳೇ!!

Tuesday, October 19, 2010

ಓ ಗುರುವೇ, ನಾ ಹೇಗೆ ಬಿಡಲಿ?

ನಾ ಹೇಗೆ ಬಿಡಲಿ,
ಓ ಗುರುವೆ ನಿನ್ನ ಸ್ಮರಣೆಯನು!
ನನಗಿಲ್ಲ ಒಂದಿನಿತು ಕಷ್ಟಗಳ ಗೊಡವೆ,
ಮರೆಯದಲೆ, ಅನುದಿನವು ನೀ ಕಾಯುತಿರುವೆ.
ನನ್ನ ಮನದೊಳಗೆ ನಿನ್ನ ನೀ ಬಂಧಿಸಿ,
ಪ್ರೀತಿಯಲಿ ಅನುಕ್ಷಣವು ಕಾಡುತಿರುವೆ.!!

ಏಕೆ ತೋರುವೆ ಗುರುವೆ,
ಈ ಪರಿಯ ಕರುಣೆಯನು,!
ನನ್ನಲೇನು ನೀ ಭಕ್ತಿಯ ಕಂಡೆ,
ನಿಸ್ವಾರ್ಥ ಸೇವೆಯನು ನಾನೇನು ಮಾಡಿದೆ,
ಅಜ್ನಾನದಲಿ ಮುಳುಗಿರುವ ನನ್ನನೇಕೆ ಎಬ್ಬಿಸಿದೆ,
ಈ ಪರಿಯ ಕೃಪೆಗೆ ನನ್ನನೇ ಏಕೆ ಆರಿಸಿದೆ!!

ಹೇಳು ಓ ಗುರುವೇ,
ನೀ ನನಗೇಕೆ ಒಲಿದಿರುವೆ
ಅದೆಷ್ಟು ಮಮತೆ, ಅದೇನು ಕರುಣೆ,
ಕಳೆವೆ, ನನ್ನೆಲ್ಲಾ ಜೀವನದ ಬವಣೆ,
ಕರೆಯದೆಲೇ ನನ್ನೆಡೆಗೆ ಓಡೋಡಿ ಬರುವೆ,
ಸುಖದುಃಖದಲಿ ನನ್ನ ಜೊತೆಜೊತೆಗೆ ನಡೆವೆ,

ಓ ಗುರುವೇ,
ಮನಸೆಲ್ಲ ನಿನ್ನಲ್ಲೆ ನಿಂತಿಹುದು,
ಕೂತಲ್ಲಿ ನಿಂತಲ್ಲಿ ನಿನ್ನನ್ನೆ ಕಾಣುವದು,
ಕಿವಿಗಪ್ಪಳಿಸುವ ಶಬ್ಧವೆಲ್ಲಾ ನಿನ್ನದೆ ವಾಣಿ
ಮಾತಿಲ್ಲ ಕತೆಯಿಲ್ಲ ನಾನೀಗ ಧ್ಯಾನಸ್ಥ ಮೌನಿ,
ಓ ಗುರುವೆ ಈ ಪ್ರೀತಿಗೆ ನಾ ಸದಾ ಚಿರರುಣಿ

Friday, October 8, 2010

ಮರುಳಾಗದಿರಿ

ಹುಡುಗರೇ ಮರುಳಾಗದಿರಿ,
ಹುಡುಗಿಯರ ಮಾದಕ ನಗೆಗೆ,
ಅವರ ಕೋಮಲ ಧ್ವನಿಗೆ!
ಅರಿತೂ ಮೋಸ ಹೋಗದಿರಿ,
ಇದು ಕಟುಕರ ಮೋಹದ ಹಾಗೆ,
ಬಲಿಗೆ ಕುರಿಯ ಕೊಬ್ಬಿಸುವ ಬಗೆ!!