Wednesday, May 11, 2011

ಬದುಕ ಮತ್ತೆ ನೀಡಿ


ಹಾರಿ ಹಾರಿ ದೂರ ಸರಿದ ಓ ನನ್ನ ಕನಸುಗಳೇ
ಬಾಚಿ ತಬ್ಬುವೆನು ತಿರುಗಿ ಬಂದುಬಿಡಿ
ಎದೆಯ ಗೂಡಲಿ ಮತ್ತೆ ಬೆಚ್ಚಗೆ ಮಲಗಿ
ಉತ್ಸಾಹದ ಬದುಕೆನಗೆ ಮತ್ತೆ ನೀಡಿ

ಭವ್ಯ ಬದುಕಿನ ಕನಸೆ, ಸುಖದ ಬಾಳಿನ ಬೆಳಕೆ
ಓ ಪ್ರೀತಿ ಮುತ್ತಿನ ಹಂಬಲವೇ, ಹಿತದ ಮಾತೆ,
ಬತ್ತದ ಮುಗುಳ್ನಗೆಯೇ, ನಿಂತಿದ್ದ ಕಾಲವೇ
ಎಲ್ಲ ಬನ್ನಿ,ಉತ್ಸಾಹದ ಬದುಕ ಮತ್ತೆ ನೀಡಿ

ತುಂಟತನದ ಬಾಲ್ಯದ ಮುಗ್ಧತೆ
ಚಿಗುರ ಮೀಸೆಯ ನವ ಅಪೇಕ್ಷೆ,
ಗೆಳತಿಯ ಜೊತೆ ಹಗಲಿರುಳು ಕೊರೆದ ಕತೆ
ಎಲ್ಲ ಬನ್ನಿ,ಉತ್ಸಾಹದ ಬದುಕ ಮತ್ತೆ ನೀಡಿ.

ಅರಿತೆ ನಿಮ್ಮ ಅಸ್ತಿತ್ವದ ಬೆಲೆ
ನಿಮ್ಮನೆಲ್ಲಾ ಕಳೆದ ಮೇಲೆ
ಮತ್ತೆ ಮತ್ತೆ ಬೇಕೆನ್ನುಸುತಿದೆ ಕನಸುಗಳೇ,
ದಯವಿಟ್ಟು ಬಂದು ಒಮ್ಮೆ ಆ ಬದುಕ ನೀಡಿ.

Wednesday, March 23, 2011

ರವಿ ಕಾಣನು!


ಹೊತ್ತು ಮೂಡುತಲೆ ಬೆಳಕ ಬಂಧನದ ಸವಿ
ಮೈತ್ರೇಯನ ಮಧುರ ಎಳೆ ರಶ್ಮಿ
ನಿಂತಲ್ಲೆ ಮತ್ತೇರಿಸುವ ಮಂದ ಮಸುಕು
ತೆರೆ ಸರಿಸಿ ಅರಳ ಬಯಸುವ ದಿನದ ಬದುಕು
ಆವನೇನು ಈಗ ದಿನವೂ ಬರುತಿಹನೇ?

ಏಲ್ಲಿ ಅಲಿಸಿದರೂ ಯಾವ ಹಕ್ಕಿಯ ಕೂಗು ಕೇಳದು
ಬಿಡಾಡಿ ನಾಯಿಗಳ ಕರ್ಕಶ ಭೋರ್ಗರೆತ
ಕಿರ್ ಕಿರ್ ಶಬ್ಧ ಕಿವಿಯಲ್ಲೆಲ್ಲಾ
ತರೆಹೇವಾರಿ ಸದ್ದುಗಳು ಸುತ್ತಮುತ್ತೆಲ್ಲಾ
ಪ್ರಶಾಂತತೆಗೆ ರವಿ ಕರಗಿದನೇ?

ರವಿಕಿರಣಕೆ ಮೈಒಡ್ದುವ ಕೈದೋಟದ ಹೂವೆಲ್ಲಿ
ಬಾಲವನೆತ್ತಿ ಅಮ್ಮನ ಮೊಲೆಯುಣ್ಣುವ ಕರುವೆಲ್ಲಿ
ಹನಿಯಿಕ್ಕಿ ತಂಪೆರವ ಹಸಿರು ಮರಗಳೆಲ್ಲಿ
ಬರಿ ವಿಷಾದ, ಧನದ ಉನ್ಮಾದ,
ಎಲ್ಲೋ ಸಂತಸ ಹುಡುಕುವ ಯೋಚನೆ
ಭವ್ಯ ಬದುಕು ಕಟ್ಟುವ ಕಾಮನೆ

ಏಲ್ಲಿಯದೋ ಮೋಹಕತೆ, ಮೂಲೆ ಸೇರಿದ ಭಾವುಕತೆ,
ನಿನ್ನೆ ಅರ್ಧಕ್ಕೇ ನಿಲ್ಲಿಸಿದ ಯೋಚನೆಯ ಕಂತೆ,
ಬಿಟ್ಟು ಕಳುಹಿಸದೆ ಒಳಗೇ ಹಿಡಿದಿಟ್ಟ ಚಿಂತೆ
ಗೊಂಚಲುಗಳಾಗಿ ಮನಸು ಭಾರವಾಗಿದೆ
ಸೂರ್ಯರಶ್ಮಿಯೂ ಒಳಗಿಣುಕದಂತಾಗಿದೆ
ಮುಂಜಾನೆಯೇ, ಸೂರ್ಯನ ಹುಡುಕುವಂತಾಗಿದೆ.....

Wednesday, January 19, 2011

ವಿಷಮ ಘಳಿಗೆ

ಮುನಿಸೆಂದು ಮುಸುಕಿನಲಿ,
ಮಲಗಿರುವ ಮಡದಿ,
ಎಬ್ಬಿಸುವ ಗೊಡವೆ ನನಗೇಕೆಂದೆ,
ಹಿಂಡುತಿಹ ಪ್ರೀತಿ,
ಭಾವನೆಗಳ ಹತ್ಯೆಯ ಭೀತಿ
ತಡೆಯದ ತಳಮಳ,
ಬಳಿ ನಡೆದೆ....

ಎಲ್ಲಿಯದೋ ಚಿಂತೆ,
ಯಾರದೋ ಕೋಪ,
ಕಳೆದ ತನ್ನತನ,
ದುಗುಡದ ಮನ,
ಏನು ವಿಷಯವೋ,
ಸಮಯ ವಿಷಮವೋ,
ಎಲ್ಲವೂ ಅರೆಕ್ಷಣದಲಿ,
ಸಮಯ ಜಾರಿದೆ.....

ಕೈಮೀರಿದ ಘಳಿಗೆ,
ಕಾಲವೇ ಹಾಗೆ,
ಮತಿ ಸ್ಥಗಿತ,
ಮಾತು ಅಪರಿಮಿತ,
ನಾನೇನೆಂದೆನೋ,
ಅವಳೇನೆಂದಳೋ
ಎಲ್ಲವೂ ಅಯೋಮಯ,
ನಾ ಸಂತೈಸಿದೆ...

ನನ್ನ ಸೋಲೊ, ಅವಳ ಗೆಲುವೋ
ಅಹಂ ಸತ್ತಿತೋ,
ಪ್ರೀತಿ ಗೆದ್ದಿತೋ,
ವೈಮನಸ್ಯ ಕಳೆಯಿತೋ,
ದಾಂಪತ್ಯ ಗೆದ್ದಿತೋ,
ಇಬ್ಬರಲೂ ಅಂಬರಕ್ಕೇರಿದ ಸಂತಸ
ಮಸುಕು ಕಳೆಯಿತು
ಮುಸುಕು ಸರಿಯಿತು....
ಅಂತೂ ಬಾಳ ಚಕ್ರ ಮುಂದೆ ಸಾಗಿತು...

Saturday, January 1, 2011

ಇದುವೇ ಆಧುನಿಕತೆ!!


ನವವರುಷವೆಂದು ನವೋಲ್ಲಾಸದ ಕೂಗು
ಮಸಣದೆಡೆ ನಡೆವಂತೆ ಮೆರವಣಿಗೆ,
ವಿಕಾರ ಚೀತ್ಕಾರ, ಹೆಂಡ ತುಂಡಿನ ಸತ್ಕಾರ
ಇದುವೇ ನವವರುಷದ ಸಂಭೃಮದ ಬಗೆ

ಕಣ್ಣುಕುಕ್ಕಿಸಿ ಝಗಮಗಿಸುವ ಬೆಳಕ ಚೆಲ್ಲಾಟ
ಗುನುಗುವ, ತೂರಾಡುವ, ಕುಡುಕರ ಓಡಾಟ
ಮತ್ತೇರಿ ಬಾಯ್ಬಡಿಯುತಿಹ ಕಾಮುಕರ ದಂಡು
ಹೆಂಗಸರು, ಗಂಡಸರು, ಇಲ್ಲೆಲ್ಲರೂ ಒಂದು!!

ಕುಡಿದರೇನೆ ಪ್ರಗತಿಯೆಂದು ಬೊಬ್ಬಿಡುವ ಜನರು
ಧರ್ಮವನು, ಮೌಲ್ಯವನು, ಬಿಟ್ಟವರೆಲ್ಲ ಪ್ರಗತಿಪರರು
ಸ್ವಂತಿಕೆಯಿಲ್ಲ, ಪರರ ನಂಬುವದಿಲ್ಲ
ತುಂಡುಡುಗೆ, ಹಾದರ, ಯಾವುದೂ ಅಸಭ್ಯವೇ ಅಲ್ಲ!!

ದೇಶ ಮುನ್ನಡೆಯಬೇಕು, ನಾವೂ ಸಾಧಿಸಬೇಕು,
ನಮಗಿತ್ತ ಸ್ವಾತಂತ್ರ್ಯವ ಅನುಭವಿಸಲೇಬೇಕು
ಇದುವೇ ಪ್ರಗತಿ, ಇದುವೇ ಆಧುನಿಕತೆ,
ಅನೈತಿಕತೆಯೇ ಮುಂದುವರಿವ ನಾಗರೀಕತೆ!!!

Thursday, December 23, 2010

ಆಹಾ ಏನು ಚಳಿ!


ಅಹಾ ಈದೇನು ಮೈ ಕೊರೆಯುವ ಚಳಿ
ಹಿಮಾಲಯದ ತಣ್ಣೀರ ಮೈಗೆರೆಚಿದ ಪರಿ
ತನುವೆಲ್ಲಾ ಗಡಗಡನೆ ನಡುಗುತಿದೆ
ಹಾಸಿಗೆಯಲ್ಲೇ ಮುದುಡಿ ಮಲಗುವಂತಾಗಿದೆ

ಬಾನಿಂದ ಭುವಿಗೆ ಬೀಳುತಿಹ ದಟ್ಟ ಮಂಜು
ಪಳಪಳ ಹೊಳೆವ ಕಿರಣಗಳ ಮೋಜು
ಚಿಟಿಪಿಟಿ ಜಿನುಗುತಿಹ ರಸ್ತೆಯಂಚಿನ ಮರ
ಚಳಿಯೇ, ಇದೆಲ್ಲ ನೀ ನಮಗಿತ್ತ ವರ.

ಸುಯ್ ಎನ್ನುತ ಬೀಸುತಿದೆ ನಿನ್ನ ಹೊತ್ತ ಗಾಳಿ
ಕೆರಳುತಿದೆ ಮನಸು ನಿನ್ನ ರೂಪವ ನೋಡಿ
ತಬ್ಬಿ ಏಕೆ ಪೀಡಿಸುತಿಹೆ ಬಿಡು ನನ್ನನ್ನು
ನಲ್ಲೆ ಬರುತಿಹಳು, ಹೋಗಿ, ನಾಳೆ ಬಾ ಇನ್ನು

ಏನು ವರ್ಣಿಸಲಿ ನಿನ್ನ ಚಳಿಯೆ ,
ಕಂಬಳಿಯ ನೆನಪ, ಪದೆಪದೆ ತರುತಿಹೆ,
ಬಿಸಿ ಏರಿಸುವ ಮನಸ ಮೂಡಿಸುತಿಹೆ,
ಪ್ರಿಯತಮೆಯ ಬಂಧನಕೆ ದಿನವೆಲ್ಲಾ ದೂಡುತಿಹೆ.

ಪ್ರಾರ್ಥಿಸುವೆ ಚಳಿಯೆ,ನೀ ನನ್ನ ಜೊತೆಗಿರು
ಕಾಲವನು ದಾಟಿ ನೀ ಎಲ್ಲು ಹೊಗದಿರು,
ಗೊಗರೆವೆ ನಾ ನಿನಗೆ, ನೀ ಅಭಯವ ನೀಡು,
ಚಳಿಯೇ ನೀ, ನಾ ಕರೆದಾಗ ಬಂದುಬಿಡು,

Wednesday, December 22, 2010

ಹೆಂಡತಿಯ ನಗುವ ಬಯಸಿ

ಹೆಂಡತಿಗೆ ತುಸು ಮುನಿಸು ಮೂಡಲು
ತಕ್ಷಣ ಅದನು ಶಮನಗೊಳಿಸಲೇಕೆ,
ಮುದ್ದು ಮುಖದಲ್ಲೆಲ್ಲಾ ಕೆಂಪು ಆವರಿಸಲು
ಇಮ್ಮಡಿಸಿದ ಸೌಂದರ್ಯವ ಸವಿಯಬಾರದೇಕೆ

ಪ್ರೀತಿಯ ನೋಟಕೆ ಹೆಂಡತಿ ತುಸು ನಾಚಲು
ಮುಖ ಹಿಗ್ಗಿಸಿ ಬೀಗುವದೇಕೆ,
ನಾಚಿಕೆಯ ಮುಖಕ್ಕೆ ಕನ್ನಡಿಯ ತೋರಿ
ಕನ್ನಡಿಯನೇ ನಾಚಿಸಬಾರದೇಕೆ

ಹೆಂಡತಿ ಸುಮ್ಮನೆ ಗದರುತಲಿರಲು
ಮುಖವ ಗಂಟಿಕ್ಕಿ ಕೋಪಿಸುವದೇಕೆ
ಕೋಮಲ ಧ್ವನಿಯ ಇಂಪ ಆಲಿಸಿ
ಮುತ್ತುದುರುತೆಂದು ಕರೆದು ತೋರಬಾರದೇಕೆ

ಮನೆಗೆಲಸದಲಿ ಹೆಂಡತಿ ಸಹಾಯ ಬಯಸಲು
ತಾತ್ಸಾರದಲಿ ಅವಳನು ದೂರುವದೇಕೆ
ಸಹನೆಯಲಿ ಅವಳ ಮಾತನು ಪಾಲಸಿ
ಆಯಾಸವೆಂದು ಮಡಿಲಲಿ ಮಲಗಬಾರದೇಕೆ.

ಒಲವಿನ ಹೆಂಡತಿ ಮೌನವಾಗಿರಲು
ಏನಾಗಿ ಹೋಯ್ತೆಂದು ಹಳಹಳಿಸಲೇಕೆ
ನಮ್ಮ ದನಿಯನೂ ಮೌನವಾಗಿಸಿ
ಅವಳ ನೋವಿಗೆ ಸ್ಪಂದಿಸಬಾರದೇಕೆ.

ಹೇಗಿದ್ದರೂ, ಏನಿದ್ದರೂ, ಅವಳ ನಗುವ ಬಯಸಿ,
ಪ್ರತಿಕ್ಷಣವೂ ಅವಳ ಪ್ರೀತಿಸಬಾರದೇಕೆ.....

Thursday, December 16, 2010

ಕನವರಿಕೆ


ನೀನೆಂತ ಪ್ರೀತಿಯ ನೀಡುತಿಹೆಯೇ ಗೆಳತಿ
ಜಗ ಕಾಣದಾಗಿದೆ,
ಯೋಚನೆ ಬರಿದಾಗಿದೆ,
ಅದೇನು ನೀ ಪ್ರೀತಿಸುವ ರೀತಿ,
ಗುರಿಯ ದಾರಿ ಮಸುಕಾಗಿದೆ
ಜೀವ ತಂಪಾಗಿ ಹೋಗಿದೆ

ಮನವ ಬಿಚ್ಚಿದರಲ್ಲಿ, ಸಿಗುವುದೇ
ನಿನ್ನ ಯೋಚನೆಯ ಕಂತೆ,
ನಾಡಿಗಳೆಲೆಲ್ಲ ರಕ್ತ ಹರಿಯುವುದೇ
ನಿನ್ನ ಪ್ರೀತಿಯಾ ಜೊತೆ.
ತಾಳಲಾರೆನು ನಾನು,
ನಾ ಹೊಟ್ಟೆ ತುಂಬಿದ ಜೇನು,
ನಿನ್ನ ಪ್ರೀತಿಯ ಮಧುವಲಿ
ನಾ ಸಿಕ್ಕಿ ಹಾರದಾದೆನು.

ಕಳೆಯುವೆನೆಂದರೂ ನಾ ಹೇಗೆ
ಕಳೆಯಲಿ ಈ ಬಂಧವನು
ತೊರೆಯುವೆನೆನೆಂದರೂ ನಾ ಹೇಗೆ
ತೊರೆಯಲಿ ನನ್ನದೇ ಜೀವವನು
ಬಂಧಿಸಿದೆ, ನರಳಿಸಿದೆ,ಮೋಹವ ಬೆಳೆಸಿದೆ,
ಮುಳುಗಿಸಿದೆ, ತೇಲಿಸಿದೆ, ನನಗೂ
ಪ್ರೀತಿಯ ಸಾಗರದಲಿ ಈಜುವದ ಕಲಿಸಿದೆ.....
ನಾನ್ಯಾರೆಂಬುದೇ ನನಗೆ ಮರೆತು ಹೋಗಿದೆ....