Tuesday, August 24, 2010

ನನ್ನ ಹೆಂಡತಿಯ ಅಡುಗೆ

ಯಾರ್ಯಾರು ಸವಿದಾರು ಈ ಬಗೆಯ ಪಾಕವನು!
ಜೊಲ್ಸುರಿಸಿ ಚಪ್ಪರಿಸೋ ಬಗೆಬಗೆಯ ಖಾದ್ಯವನು!!
ಸವಿಸವಿದು ತೇಗುವಾ ಭಾಗ್ಯ ನನಗೊಬ್ಬನಿಗೇ!
ನಾ ಹೇಗೆ ಹೊಗಳಲಿ ನನ್ನ ಹೆಂಡತಿಯ ಅಡುಗೆ?

ಮುಂಜಾನೆ ನಾನೆದ್ದು ತಿಂಡಿಯಾ ನೆನೆಸೆ!
ಕೈಗಿಡುವಳು ಆರೇಳು ನೀರಿನಾ ದೋಸೆ.!!
ಹಾಲು ಕೈಗಿತ್ತು ಕೇಳುವಳು ಆಸ್ರೀಗೆ ಹೇಗೆ?
ನಾ ಏನು ಹೊಗಳಲಿ ನನ್ನ ಹೆಂಡತಿಯ ಅಡುಗೆ?

ಮುದ್ಮುದ್ದೆ ಚಿತ್ರನ್ನ, ಪುಳಿಯೊಗರೆ ಪಲಾವು,
ಪ್ರತಿದಿನವು ಹೊಸ ರುಚಿಯ ಅನುಭವವು
ಅನ್ನ ಮೊಸರು, ಸಾರು ಮಧ್ಯಾಹ್ನಕೆ, ರಾತ್ರಿಗೆ,
ನಾ ಹೇಗೆ ವರ್ಣಿಸಲಿ ನನ್ನ ಹೆಂಡತಿಯ ಅಡುಗೆ?

ಸೀದೋದ ಓಗ್ಗರಣೆ, ಅರೆಬೆಂದ ಪಲ್ಯ,
ನೆನಪಿಸುವಳು ದಿನವೂ ಉಪ್ಪಿನಾ ಮೌಲ್ಯ
ಜಾಮೂನು, ಪಾಯಸ, ಒಮ್ಮೊಮ್ಮೆ ನಾಲಿಗೆಗೆ
ಎನಿತು ವರ್ಣಿಸಲಿ ನನ್ನ ಹೆಂಡತಿಯ ಅಡುಗೆ?

ನಗುನಗುತ ಬಡಿಸುವಳು ಬಲು ಪ್ರೀತಿಯಲಿ
ಮರೆಯುವೆನು ಜಗವೆಲ್ಲ ಇವಳ ಸನಿಹದಲಿ
ಸರಿಸಾಟಿ ಏನುಂಟು ನನ್ನವಳ ಒಲವಿಗೆ?
ನಾ ಹೇಗೆ ಹೊಗಳಲಿ ಇವಳ ಪ್ರೀತಿಯಾ ಬಗೆ?

Monday, August 2, 2010

ನೆನಪುಗಳ ತುಣುಕು

ನೆನಪಾಗುತಿದೆ ಗೆಳತಿ ನಮ್ಮಿಬ್ಬರ ಆ ಮಿಲನ
ನಸುನಾಚಿ ತಂದಿಟ್ಟ ಆ ಭಾರಿ ಔತಣ,
ಕಡೆಗಣ್ಣಿನಲೆ ನನ್ನ ನೋಡಲು ಕಾತರಿಸಿದ ಆ ಕಣ್ಣು
ಬಂಧಿಸಿದೆ ಆ ನೋಟದಲೆ ಈ ನನ್ನ ಮನಸನ್ನು.

ನಡೆದಿತ್ತು ನೆಂಟರದು ಏನೇನೊ ಸಂವಾದ
ಕ್ಷಣ ಕ್ಷಣಕೂ ಏರುತ್ತಿತ್ತು ನನ್ನೆದೆಯ ನಿನಾದ.
ತೋರಿದರು ಇಬ್ಬರಿಗೂ ಮಹಡಿಯಾ ದಾರಿ
ಅಳುಕುತಲೆ ಮುನ್ನಡೆದೆ ಮೆಟ್ಟಿಲನು ಏರಿ.

ಎಗ್ಗಿಲ್ಲದೆ ಸಾಗಿತು ನನ್ನ ಪರಿಚಯ ಭಾಷಣ
ನಿನ್ನದೋ ಚುಟುಕು ಉತ್ತರ, ಆಮೇಲೆ ಬರೀ ಮೌನ.
ತೆರಿದಿಟ್ಟೆ ನನ್ನೆಲ್ಲಾ ಜೀವನದ ಆಸೆ
ಸುಖಬಾಳು ಬಯಸಿದ ನಿನಗಿತ್ತೆ ಭಾಷೆ.

ನಂತರದ್ದೆಲ್ಲಾ ಮಧುರಾತಿ ಮಧುರ
ಮನ ತುಂಬಿ, ಮನ ಬೆಳಗಿ, ನನಗಿತ್ತೆ ಉಸಿರ.
ಭಾವ ತುಂಬಿದೆ, ನಿನ್ನೊಡನೆ ಬಾಳ ಮುನ್ನಡೆಸುವ
ಭುವಿಯಲ್ಲೆ ನೀಡಿದೆ, ಸ್ವರ್ಗದನುಭವವ.

--ಮಹಾ

Friday, June 25, 2010

ಓ ನನ್ನ ಉಸಿರೆ

ನುಡಿಯಲಾರೆ ನಲ್ಲೆ ನಿನ್ನೀ ಒಲುಮೆಯ
ನೆನೆದೊಡನೆ ಸಿಗುವ ಆ ಸವಿಯ!
ನಿಲ್ಲದಾಗಿದೆ ಮನ ನನ್ನೊಳಗೆ
ನೀರಾಗಿ ಪ್ರೀತಿ ಜಾರಿದೆ ಒಡಲೊಳಗೆ!!

ನಿತ್ಯ ಸಂಭ್ರಮ, ಮುಗುಳ್ನಗು ಅನುದಿನ
ನಿರತ ಮನದೊಳು ನಿನದೆ ಧ್ಯಾನ!
ನವ್ಯ ಜೀವನ, ಪ್ರೀತಿ ಅನುಕ್ಷಣ
ನೂರು ಜನುಮಕು ಇದು ಬಿಡದ ಬಂಧನ!!

ನೀಡಿದೆ ನೀ ನನಗೆ ನವ ಜೀವನ
ನೋವ ಮರೆಸಿದ ಪ್ರಿಯೇ, ನಿನಗಿದೊ ನಮನ!
ನೆನಪು ಬಲವಾಗಿದೆ, ವಿರಹ ಬಾಧಿಸುತಿದೆ
ನವ ಪ್ರೇಮದ ಕುರುಡು ಕಾಡಿದೆ!!

ನಡೆದು ಬಂದೆ ನನ್ನ ಬಾಳ ಅರಮನೆಗೆ
ನಿಂತೆ ಏರಿ ಹ್ರದಯ ಗದ್ದುಗೆಗೆ!
ನೀನಿಲ್ಲದಾ ಬಾಳು ನಾ ಊಹಿಸಲಾರೆ
ನೀನೆ ನನಗೆಲ್ಲ, ಓ ನನ್ನ ಉಸಿರೆ!!


----ಮಹಾ

Friday, May 7, 2010

ನಿರೀಕ್ಷೆ

ಭಾವ ಬೆಳೆದು ಭಾವನೆಯಾಯ್ತು,
ಮನಸು ಬಿರಿದ ಮಲ್ಲಿಗೆಯಾಯ್ತು,
ಮಾತು ಮರೆತು ಮೌನ ನೆಲೆಯಾಯ್ತು,
ನನ್ನೆದೆಯ ಪ್ರೀತಿ ನಿನ್ನೆಡೆಗೆ ಸರಿಯಿತು.

ನಮ್ಮಿಬ್ಬರ ಈ ಮಿಲನ, ಬಾಳಿನ ಸುದಿನ,
ಪ್ರತಿ ಜನ್ಮದಲೂ ನವನವೀನ,
ಈ ಘಳಿಗೆ ಅಮೃತಕೆ ಸಮಾನ
ಪಾವನವಾಯ್ತು ಗೆಳತಿ ಈ ನನ್ನ ಜೀವನ.

ಕಾದಿದೆ ಮನ ನಿನ್ನೆದೆಯ ಮಾತಿಗೆ
ತಂಪನೀಯುವ ನವಿರು ತಂಗಾಳಿಗೆ
ಇಂಚರದ ಇಂಪಾದ ಶಬ್ಧ ಸಂಗೀತಕೆ
ಎಳೆ ರಶ್ಮಿ ಸೋಕುವ ಮಧುರ ಅನುಭವಕೆ.

ಹೇಳಿಬಿಡು ಗೆಳತಿ ನನ್ನ ಕಾಯಿಸಬೇಡ
ತವಕದಿಂದಿಹ ನನ್ನ ನೋಯಿಸಬೇಡ
ನನ್ನೀ ಜೀವನಕೆ ನೀ ಜೋತೆಯಾಗುವೆಯಾ?
ಹೇಳು ನೀ ನನ್ನ ಪ್ರೀತಿಸುವೆಯಾ?
ಹೇಳು ನೀ ನನ್ನ ಪ್ರೀತಿಸುವೆಯಾ???

----ಮಹಾ

Thursday, April 15, 2010

ಬೆಂಗಳೂರು ಬಸ್ಸಿನ ಅನುಭವ

ಬೆಂಗಳೂರು ಬಸ್ಸಿನ ಪಯಣ
ನರಕದನುಭವಕೆ ಸುಲುಭ ವಿಧಾನ!!
ಹತ್ತಿದೊಡನೆಯೇ ಮುಂದೆ ಸಾಗಿರೆಂಬ ಕೂಗು
ನೂಕಾಟ ಜಗ್ಗಾಟದಾ ನಡುವೆ ಸೀಟಿಲ್ಲದಾ ಕೊರಗು!!
ಸುತ್ತಮುತ್ತ ಚಿತ್ರ ವಿಚಿತ್ರ ಭಾಷೆಗಳ ಗದ್ದಲ
ನಡುವೆ ಅವರಿವರೊಡನೆ ನಿರ್ವಾಹಕರ ಜಗಳ!!
ಮುಂದೆ ಇಣುಕಿದರಲ್ಲಿ ಮನಸೆಳವಾ ನೋಟ
ನರಕದಲೂ ಕೂಡಾ ರಂಭೆ ಉರ್ವಶಿಯರ ಕಾಟ!!
ಹರಿಯುವದು ಆಗಾಗ್ಗೆ ಸೀಟಿನೆಡೆ ಗಮನ
ಎದ್ದರೆ ಅವರಿವರ ನೂಕಿ ಕೂರುವಾ ಜನ!!
ನಿಲ್ದಾಣ ಸಮೀಪಿಸಿದೊಡೆ ಇಳಿಯುವ ಕಾತುರ
ಇಳಿದೊಡನೆ ಅನುಭವ ಪಡೆದ ಹೊಸ ಉಸಿರ!!

----ಮಹಾ ಭಟ್

ಮನದ ಮಾತು

ಮನಸೆ ನಿಲ್ಲು, ಹೊರಳಾಡಬೇಡ
ಕಟ್ಟಿರುವೆ ಕಚ್ಚಿದಂತೆ ಕುಣಿದಾಡ ಬೇಡ
ಬಯಕೆ ಬೊಬ್ಬಿರಿದು ಬಂಧಿಸುವ ಮೊದಲೆ
ನೆಲೆಸು ನಿನ್ನೊಳಗಿನ ಸತ್ಯ ರೂಪದೆಲೆ

ಬುದ್ಧಿ ಬಾರದೆ ನಿನಗೆ, ನಿಲ್ಲಿಸು ಕುತರ್ಕಗಳ
ತೊಚಿದೆಡೆ ಓಡುವ ಹಳೆ ಚಾಳಿಗಳ
ಸುಖ ಮರೀಚಿಕೆಯಾಯ್ತು, ದುಃಖ ನಿತ್ಯವಾಯ್ತು
ಪಾಪದ ಕೊಡ ತುಂಬಿ ಹೊರ ಚೆಲ್ಲತೊಡಗಿತು

ನೆನೆ ನೆನೆ ಗುರುಚರಣವ ತಡಮಾಡದೆಲೆ
ಇದುವೆ ಪಾಪಿಗಳ ಉದ್ದರಿಸೊ ಸನಿಹ ನೆಲೆ
ಭಜಿಸು ಅನುದಿನವು ಗುರು ನಾಮವ
ಪಾಪಗಳ ತೊಳೆವ ಸುಲಭ ಅಮೃತವ.

ಗುರುವೆ ಬೆಳಕು, ಗುರುವೆ ಬದುಕು
ಗುರುನಾಮವೆ ಚಿಂತನಕು, ಸಕಲಕು
ಗುರುವೊಂದೆ ದಾರಿ, ಭಜಿಸು ಬಿಡದೆಲೆ
ದಾಟಿಬಿಡು ಮೋಕ್ಷಕ್ಕೆ ಭೂಮಿ ನುಂಗುವ ಮೊದಲೆ

---ಮಹಾ ಭಟ್

Wednesday, April 14, 2010

ಮೌನಿಯಾದೆ ಏಕೆ ಗೆಳತಿ!!!

ಮೌನಿಯಾದೆ ಏಕೆ ಗೆಳತಿ-
ನಿಲ್ಲಿಸಿ ಸವಿಯಾದ ಮಾತುಗಳ
ಬೆಳದಿಂಗಳ ಬೆಳಕಿನ ಚಿತ್ತಾರಗಳ
ಕೋಗಿಲೆಯ ಸವಿಗಾನದ ಸಂಗೀತಗಳ
ಮುಂಜಾನೆಯ ಎಳೆ ಸುಂದರ ರಶ್ಮಿಗಳ

ಮೌನಿಯಾದೆ ಏಕೆ ಗೆಳತಿ-
ನಿಲ್ಲಿಸಿ ಎಲ್ಲ ಹಾವ ಭಾವಗಳ
ಸಾಗರದ ತೆರೆಯ ಕಂಪನಗಳ
ಮನೆ ಗುಬ್ಬಿಯ ಕೊರಳ ಕುಣಿತಗಳ
ತಂಗಾಳಿಯ ಮಧುರ ಆನಂದಗಳ

ಮೌನಿಯಾದೆ ಏಕೆ ಗೆಳತಿ-
ನಿಲ್ಲಿಸಿ ಮುಂಗುರಳ ನಾಟ್ಯಗಳ
ಕೆನ್ನೆಯ ನಗುವಿನ ಚಿತ್ತಾರಗಳ
ನಾಸಿಕದ ಸುಂದರ ಹುಸಿ ಕೋಪಗಳ
ಚೆಲುವ ಕೆಂದುಟಿಗಳ ಚಲನೆಗಳ

--------ಮಹಾ ಭಟ್