Thursday, April 15, 2010

ಬೆಂಗಳೂರು ಬಸ್ಸಿನ ಅನುಭವ

ಬೆಂಗಳೂರು ಬಸ್ಸಿನ ಪಯಣ
ನರಕದನುಭವಕೆ ಸುಲುಭ ವಿಧಾನ!!
ಹತ್ತಿದೊಡನೆಯೇ ಮುಂದೆ ಸಾಗಿರೆಂಬ ಕೂಗು
ನೂಕಾಟ ಜಗ್ಗಾಟದಾ ನಡುವೆ ಸೀಟಿಲ್ಲದಾ ಕೊರಗು!!
ಸುತ್ತಮುತ್ತ ಚಿತ್ರ ವಿಚಿತ್ರ ಭಾಷೆಗಳ ಗದ್ದಲ
ನಡುವೆ ಅವರಿವರೊಡನೆ ನಿರ್ವಾಹಕರ ಜಗಳ!!
ಮುಂದೆ ಇಣುಕಿದರಲ್ಲಿ ಮನಸೆಳವಾ ನೋಟ
ನರಕದಲೂ ಕೂಡಾ ರಂಭೆ ಉರ್ವಶಿಯರ ಕಾಟ!!
ಹರಿಯುವದು ಆಗಾಗ್ಗೆ ಸೀಟಿನೆಡೆ ಗಮನ
ಎದ್ದರೆ ಅವರಿವರ ನೂಕಿ ಕೂರುವಾ ಜನ!!
ನಿಲ್ದಾಣ ಸಮೀಪಿಸಿದೊಡೆ ಇಳಿಯುವ ಕಾತುರ
ಇಳಿದೊಡನೆ ಅನುಭವ ಪಡೆದ ಹೊಸ ಉಸಿರ!!

----ಮಹಾ ಭಟ್

ಮನದ ಮಾತು

ಮನಸೆ ನಿಲ್ಲು, ಹೊರಳಾಡಬೇಡ
ಕಟ್ಟಿರುವೆ ಕಚ್ಚಿದಂತೆ ಕುಣಿದಾಡ ಬೇಡ
ಬಯಕೆ ಬೊಬ್ಬಿರಿದು ಬಂಧಿಸುವ ಮೊದಲೆ
ನೆಲೆಸು ನಿನ್ನೊಳಗಿನ ಸತ್ಯ ರೂಪದೆಲೆ

ಬುದ್ಧಿ ಬಾರದೆ ನಿನಗೆ, ನಿಲ್ಲಿಸು ಕುತರ್ಕಗಳ
ತೊಚಿದೆಡೆ ಓಡುವ ಹಳೆ ಚಾಳಿಗಳ
ಸುಖ ಮರೀಚಿಕೆಯಾಯ್ತು, ದುಃಖ ನಿತ್ಯವಾಯ್ತು
ಪಾಪದ ಕೊಡ ತುಂಬಿ ಹೊರ ಚೆಲ್ಲತೊಡಗಿತು

ನೆನೆ ನೆನೆ ಗುರುಚರಣವ ತಡಮಾಡದೆಲೆ
ಇದುವೆ ಪಾಪಿಗಳ ಉದ್ದರಿಸೊ ಸನಿಹ ನೆಲೆ
ಭಜಿಸು ಅನುದಿನವು ಗುರು ನಾಮವ
ಪಾಪಗಳ ತೊಳೆವ ಸುಲಭ ಅಮೃತವ.

ಗುರುವೆ ಬೆಳಕು, ಗುರುವೆ ಬದುಕು
ಗುರುನಾಮವೆ ಚಿಂತನಕು, ಸಕಲಕು
ಗುರುವೊಂದೆ ದಾರಿ, ಭಜಿಸು ಬಿಡದೆಲೆ
ದಾಟಿಬಿಡು ಮೋಕ್ಷಕ್ಕೆ ಭೂಮಿ ನುಂಗುವ ಮೊದಲೆ

---ಮಹಾ ಭಟ್

Wednesday, April 14, 2010

ಮೌನಿಯಾದೆ ಏಕೆ ಗೆಳತಿ!!!

ಮೌನಿಯಾದೆ ಏಕೆ ಗೆಳತಿ-
ನಿಲ್ಲಿಸಿ ಸವಿಯಾದ ಮಾತುಗಳ
ಬೆಳದಿಂಗಳ ಬೆಳಕಿನ ಚಿತ್ತಾರಗಳ
ಕೋಗಿಲೆಯ ಸವಿಗಾನದ ಸಂಗೀತಗಳ
ಮುಂಜಾನೆಯ ಎಳೆ ಸುಂದರ ರಶ್ಮಿಗಳ

ಮೌನಿಯಾದೆ ಏಕೆ ಗೆಳತಿ-
ನಿಲ್ಲಿಸಿ ಎಲ್ಲ ಹಾವ ಭಾವಗಳ
ಸಾಗರದ ತೆರೆಯ ಕಂಪನಗಳ
ಮನೆ ಗುಬ್ಬಿಯ ಕೊರಳ ಕುಣಿತಗಳ
ತಂಗಾಳಿಯ ಮಧುರ ಆನಂದಗಳ

ಮೌನಿಯಾದೆ ಏಕೆ ಗೆಳತಿ-
ನಿಲ್ಲಿಸಿ ಮುಂಗುರಳ ನಾಟ್ಯಗಳ
ಕೆನ್ನೆಯ ನಗುವಿನ ಚಿತ್ತಾರಗಳ
ನಾಸಿಕದ ಸುಂದರ ಹುಸಿ ಕೋಪಗಳ
ಚೆಲುವ ಕೆಂದುಟಿಗಳ ಚಲನೆಗಳ

--------ಮಹಾ ಭಟ್