Wednesday, January 19, 2011

ವಿಷಮ ಘಳಿಗೆ

ಮುನಿಸೆಂದು ಮುಸುಕಿನಲಿ,
ಮಲಗಿರುವ ಮಡದಿ,
ಎಬ್ಬಿಸುವ ಗೊಡವೆ ನನಗೇಕೆಂದೆ,
ಹಿಂಡುತಿಹ ಪ್ರೀತಿ,
ಭಾವನೆಗಳ ಹತ್ಯೆಯ ಭೀತಿ
ತಡೆಯದ ತಳಮಳ,
ಬಳಿ ನಡೆದೆ....

ಎಲ್ಲಿಯದೋ ಚಿಂತೆ,
ಯಾರದೋ ಕೋಪ,
ಕಳೆದ ತನ್ನತನ,
ದುಗುಡದ ಮನ,
ಏನು ವಿಷಯವೋ,
ಸಮಯ ವಿಷಮವೋ,
ಎಲ್ಲವೂ ಅರೆಕ್ಷಣದಲಿ,
ಸಮಯ ಜಾರಿದೆ.....

ಕೈಮೀರಿದ ಘಳಿಗೆ,
ಕಾಲವೇ ಹಾಗೆ,
ಮತಿ ಸ್ಥಗಿತ,
ಮಾತು ಅಪರಿಮಿತ,
ನಾನೇನೆಂದೆನೋ,
ಅವಳೇನೆಂದಳೋ
ಎಲ್ಲವೂ ಅಯೋಮಯ,
ನಾ ಸಂತೈಸಿದೆ...

ನನ್ನ ಸೋಲೊ, ಅವಳ ಗೆಲುವೋ
ಅಹಂ ಸತ್ತಿತೋ,
ಪ್ರೀತಿ ಗೆದ್ದಿತೋ,
ವೈಮನಸ್ಯ ಕಳೆಯಿತೋ,
ದಾಂಪತ್ಯ ಗೆದ್ದಿತೋ,
ಇಬ್ಬರಲೂ ಅಂಬರಕ್ಕೇರಿದ ಸಂತಸ
ಮಸುಕು ಕಳೆಯಿತು
ಮುಸುಕು ಸರಿಯಿತು....
ಅಂತೂ ಬಾಳ ಚಕ್ರ ಮುಂದೆ ಸಾಗಿತು...

Saturday, January 1, 2011

ಇದುವೇ ಆಧುನಿಕತೆ!!


ನವವರುಷವೆಂದು ನವೋಲ್ಲಾಸದ ಕೂಗು
ಮಸಣದೆಡೆ ನಡೆವಂತೆ ಮೆರವಣಿಗೆ,
ವಿಕಾರ ಚೀತ್ಕಾರ, ಹೆಂಡ ತುಂಡಿನ ಸತ್ಕಾರ
ಇದುವೇ ನವವರುಷದ ಸಂಭೃಮದ ಬಗೆ

ಕಣ್ಣುಕುಕ್ಕಿಸಿ ಝಗಮಗಿಸುವ ಬೆಳಕ ಚೆಲ್ಲಾಟ
ಗುನುಗುವ, ತೂರಾಡುವ, ಕುಡುಕರ ಓಡಾಟ
ಮತ್ತೇರಿ ಬಾಯ್ಬಡಿಯುತಿಹ ಕಾಮುಕರ ದಂಡು
ಹೆಂಗಸರು, ಗಂಡಸರು, ಇಲ್ಲೆಲ್ಲರೂ ಒಂದು!!

ಕುಡಿದರೇನೆ ಪ್ರಗತಿಯೆಂದು ಬೊಬ್ಬಿಡುವ ಜನರು
ಧರ್ಮವನು, ಮೌಲ್ಯವನು, ಬಿಟ್ಟವರೆಲ್ಲ ಪ್ರಗತಿಪರರು
ಸ್ವಂತಿಕೆಯಿಲ್ಲ, ಪರರ ನಂಬುವದಿಲ್ಲ
ತುಂಡುಡುಗೆ, ಹಾದರ, ಯಾವುದೂ ಅಸಭ್ಯವೇ ಅಲ್ಲ!!

ದೇಶ ಮುನ್ನಡೆಯಬೇಕು, ನಾವೂ ಸಾಧಿಸಬೇಕು,
ನಮಗಿತ್ತ ಸ್ವಾತಂತ್ರ್ಯವ ಅನುಭವಿಸಲೇಬೇಕು
ಇದುವೇ ಪ್ರಗತಿ, ಇದುವೇ ಆಧುನಿಕತೆ,
ಅನೈತಿಕತೆಯೇ ಮುಂದುವರಿವ ನಾಗರೀಕತೆ!!!