Wednesday, March 23, 2011

ರವಿ ಕಾಣನು!


ಹೊತ್ತು ಮೂಡುತಲೆ ಬೆಳಕ ಬಂಧನದ ಸವಿ
ಮೈತ್ರೇಯನ ಮಧುರ ಎಳೆ ರಶ್ಮಿ
ನಿಂತಲ್ಲೆ ಮತ್ತೇರಿಸುವ ಮಂದ ಮಸುಕು
ತೆರೆ ಸರಿಸಿ ಅರಳ ಬಯಸುವ ದಿನದ ಬದುಕು
ಆವನೇನು ಈಗ ದಿನವೂ ಬರುತಿಹನೇ?

ಏಲ್ಲಿ ಅಲಿಸಿದರೂ ಯಾವ ಹಕ್ಕಿಯ ಕೂಗು ಕೇಳದು
ಬಿಡಾಡಿ ನಾಯಿಗಳ ಕರ್ಕಶ ಭೋರ್ಗರೆತ
ಕಿರ್ ಕಿರ್ ಶಬ್ಧ ಕಿವಿಯಲ್ಲೆಲ್ಲಾ
ತರೆಹೇವಾರಿ ಸದ್ದುಗಳು ಸುತ್ತಮುತ್ತೆಲ್ಲಾ
ಪ್ರಶಾಂತತೆಗೆ ರವಿ ಕರಗಿದನೇ?

ರವಿಕಿರಣಕೆ ಮೈಒಡ್ದುವ ಕೈದೋಟದ ಹೂವೆಲ್ಲಿ
ಬಾಲವನೆತ್ತಿ ಅಮ್ಮನ ಮೊಲೆಯುಣ್ಣುವ ಕರುವೆಲ್ಲಿ
ಹನಿಯಿಕ್ಕಿ ತಂಪೆರವ ಹಸಿರು ಮರಗಳೆಲ್ಲಿ
ಬರಿ ವಿಷಾದ, ಧನದ ಉನ್ಮಾದ,
ಎಲ್ಲೋ ಸಂತಸ ಹುಡುಕುವ ಯೋಚನೆ
ಭವ್ಯ ಬದುಕು ಕಟ್ಟುವ ಕಾಮನೆ

ಏಲ್ಲಿಯದೋ ಮೋಹಕತೆ, ಮೂಲೆ ಸೇರಿದ ಭಾವುಕತೆ,
ನಿನ್ನೆ ಅರ್ಧಕ್ಕೇ ನಿಲ್ಲಿಸಿದ ಯೋಚನೆಯ ಕಂತೆ,
ಬಿಟ್ಟು ಕಳುಹಿಸದೆ ಒಳಗೇ ಹಿಡಿದಿಟ್ಟ ಚಿಂತೆ
ಗೊಂಚಲುಗಳಾಗಿ ಮನಸು ಭಾರವಾಗಿದೆ
ಸೂರ್ಯರಶ್ಮಿಯೂ ಒಳಗಿಣುಕದಂತಾಗಿದೆ
ಮುಂಜಾನೆಯೇ, ಸೂರ್ಯನ ಹುಡುಕುವಂತಾಗಿದೆ.....