Tuesday, September 28, 2010

ನಾಯಿಗಳೇ ಅರಚುವಿರೇಕೆ?

ನಾಯಿಗಳೇ ಅರಚುವಿರೇಕೆ,
ನಮಗೆ ನಿದ್ದೆ ಬಾರದ ಹಾಗೆ.
ಯಾರು ಕಲಿಸಿದರೋ ನಿಮಗೆ,
ಸುಖ ನಿದ್ದೆ ಕೆಡಿಸುವ ಹೊಸ ಬಗೆ,

ದೂರದೆಲ್ಲಿಯದೋ ಶಬ್ಧಕೆ,
ಇಲ್ಲಿಂದಲೇ ಪ್ರತಿಧ್ವನಿ ಏಕೆ?
ಹೋಗಬಾರದೆ ಅಲ್ಲಿಗೇ,
ಇಲ್ಲಿಯೇ ಅಬ್ಬರಿಸಬೇಕೆ?

ಇದೇನು ದೇವರಿಗೆ ನಿಮ್ಮ ಪ್ರಾರ್ಥನೆಯೋ ?
ಸಂಗೀತದ ರಸಸಂಜೆಗೆ ರೂಢಿಯೋ,
ಹಸಿವಿನಿಂದ ಕಂಗೆಟ್ಟ ರೊದನೆಯೋ
ಸ್ವಚ್ಛಂದ ಬಾಳ ಭಿಕ್ಷೆಗೆ ಮೊರೆಯೋ ?

ಯಾಕೀ ಚೀತ್ಕಾರ, ನಮ್ಮೆಡೆಗೆ ತಿರಸ್ಕಾರ,
ನಾವೇನ ಮಾಡಿರಿವೆವು ನಿಮಗಪಕಾರ
ಅದೇಕೆ ನಮ್ಮ ಮೇಲೆ ಕೋಪ ಈ ಪರಿ,
ಸುಮ್ಮನಿರುವ ನಮಗೇಕೆ ತೊಂದರೆ ನೀಡುವಿರಿ?

Friday, September 24, 2010

ಎಂಥಾ ಸ್ನೇಹಿತರು!!


ಆಗ,
ಏನು ಸ್ನೇಹ, ಎಂಥ ಛಂದ,
ಎನೇ ಬರಲಿ, ಬಿಡೆವು ಬಂಧ,
ನಾವೀರ್ವರು, ಜೀವದ ಗೆಳೆಯರು!
ಈಗ,
ಕ್ಷಣಕೊಂದು ಹೊಸ ವಿವಾದ
ನಿತ್ಯ ಜಗಳ, ಚೀರುನಾದ,
ಕಾರಣ ಇಬ್ಬರೂ, ಗಂಡ ಹೆಂಡಿರು!!

Thursday, September 23, 2010

ಹುಡುಗಿಯರ ಗೆಳೆತನ!


ಹುಡುಗಿಯರ ಜೊತೆ ಗೆಳೆತನವೆಂದರೆ,
ವಾರದ ಹಿಂದೆ ನುಣ್ಣಗಾಗಿಸಿದ ತಲೆ ಸವರಿದಂತೆ!
ಅರೆ ಮೊಳೆತ ಕೂದಲು ಕೈ ಚುಚ್ಚುತ್ತಿದ್ದರೆ,
ಸುಖವೆಂದು, ನೋವಲೂ ಮೈಮರೆಯುವಂತೆ!!

Wednesday, September 22, 2010

ಕೂಗು ಯಾಕೆ?


ನನಗೂ ಬೇಕು, ಅವಗೂ ಬೇಕು,
ಮಂತ್ರಿಯಾಗಿ
ಮಾಡಲೇ ಬೇಕು,

ಯಾಕೆ ಹೀಗೆ, ಇವರು ಕೂಗಿತಿಹರು?!
ಹೇಗೋ ಏನೋ, ಅರಮನೆಗೆ ಬಂದು,
ರಾಜನೇರೋ ಸಿಂಹಾಸನವ ಕಂಡು,

ನಾಯಿಗಳೇಕೆ ತಮ್ಮಲೇ ಕಚ್ಚಾಡುತಿಹವು?!!

Tuesday, September 21, 2010

ಹೆಂಡತಿಯೆಂದರೆ!

ಹೆಂಡತಿಯೆಂದರೆ ಹೀಗೆನೆ,
ಮದುವೆಯವರೆಗೂ
ನಾಚಿಕೆ ಮೌನ.
ಆಮೇಲೆ,
ಬೆದರಿಸುವ ದುರ್ಗಾ ವಾಹನ!
ಅವಳ ಮಾತು ಎಂದರೆ ಹಾಗೇನೆ,
ಮದುವೆಯವರೆಗೂ
ಎಲ್ಲವೂ ಸುಂದರ ಕವನ.
ಆಮೇಲೆ,
ದಿನವೂ ಕಿವಿ ಕೊರೆಯುವ ಸಾಧನ!!

ಇವರೇಕೆ ಅರಿಯರು?

ಮರುಳಾಗುವರು ಹಳ್ಳಿ ಹುಡುಗರು,
ನಗರದ ಹುಡುಗಿಯರ ಚೆಲುವಿಗೆ,
ಅವರ ಮಾದಕ ನಡೆ ನುಡಿಗೆ!
ಪಾಪ ಇವರೇಕೆ ಅರಿಯರು
ಇಲ್ಲಿ ಹುಡುಗರೆಂದರೆ, ಹುಡುಗಿಯರಿಗೆ,
ಮೋಜು ಕೊಡುವ ಮಂಗಗಳ ಹಾಗೆ!!

Friday, September 17, 2010

ದೇವ ಗಣೇಶ

ದೇವನೆ ಬಾ ಎಂದು ಭಜಿಸುತಲಿರಲು
ಕಷ್ಟವ ಕಳೆಯಲು ಮೊರೆಯಿಡಿತಿರಲು
ನಗುತಲೆ ಬರುವನು ನಮ್ಮಯ ಗಣಪ
ಭುವಿಯನು ಬೆಳಗುವ ವೀರ ಪ್ರದೀಪ.

ಕೈಯಲಿ ಮೋದಕ, ಕೊರಳಲಿ ಮಾಲೆ,
ಬಣ್ಣ ಬಣ್ಣದ ಕಿರೀಟ, ಶಿರದ ಮೇಲೆ,
ಬೃಹ್ಮಾಂಡ ಹೊಟ್ಟೆಗೆ ಹಾವಿನ ಬಂಧನ
ಇಲಿಯೇ ಇವನನು ಹೋರುವ ವಾಹನ.

ಚಕ್ಕುಲು ಕೋಡ್ಬಳೆ ಪಂಚಕಜ್ಜಾಯ
ತಿನ್ನಲು ಇವನಿಗೆ ಬಹಳ ಪ್ರಿಯ.
ಬಿಡದೆ ಬರುವನು ಭಾದ್ರಪದ ಚೌತಿಯಲಿ
ಪ್ರೀತಿ, ಭಕ್ತಿಯ ಬೆಳೆಸುವನೆಲ್ಲರಲಿ.

ಪ್ರಥಮ ವಂದಿತನು, ಕಷ್ಟವ ಕಳೆವನು,
ಎಲ್ಲರ ಮೆಚ್ಚಿನ ದೇವನು ಇವನು.
ಎಲ್ಲರ ರಂಜಿಸಿ, ಹೊಟ್ಟೆಯ ತುಂಬಿಸಿ,
ಸಲಹುವನೆಲ್ಲರ ಮುದದಲಿ ಹರಸಿ.

ಕೈಲಾಸ ವಾಸಿಯು, ಸುಂದರ ವದನನು,
ಗೌರಿಯ ಜೊತೆಗೂಡಿ ಓಡುತ ಬರುವನು.
ಎಲ್ಲರ ನೋಡಿ, ವರವನು ನೀಡಿ,
ನಗುತಲೆ ನಡೆವನು ನೀರಿನಡಿ.

---------------ಮಹಾ

Wednesday, September 15, 2010

ಹೂವಂತ ಹುಡುಗಿ


ಹೂವಂತ ಹುಡುಗಿ ಎಂದು ಹೂವೊಂದ ಕೊಟ್ಟೆ,
ಕೈಯಲ್ಲಿ ಕೈಯ ಹಿಡಿದು ಪ್ರೇಮಕ್ಕೆ ಮೊರೆಯಿಟ್ಟೆ!
ಭಾವಕ್ಕೆ ಬೆಲೆಕೊಟ್ಟು ಪ್ರೀತಿಸುವ ಬದಲು
ರಾಖಿ ಕಟ್ಟಿ, ಹಣವ ನೀಡೆಂದಳು!!

Wednesday, September 8, 2010

ನಗರದ ಅನಾಗರಿಕರು


ಅಬ್ಬಾ ಏನೀ ಸಂಚಾರ, ಏನೀ ದಟ್ಟಣೆ,
ಎಲ್ಲದಕೂ ಕಾರ‍ಣ ಇವರೆನೆ!
ಇವರಿಗಿಲ್ಲ ಒಂದಿನಿತು ಕಾಯುವ ಸಹನೆ,
ರಸ್ತೆಯೇ ಇವರಿಗೆಲ್ಲ,ಕಾರ್ಯಾಲಯ, ಮನೆ!!

ನಡೆಯುವರು ನುಗ್ಗುವರು ಅತ್ತಿತ್ತ ನೋಡದೆ,
ದಾರಿಯುದ್ದಕೂ ಕರ್ಕಶ ಶಬ್ಧವ ಮಾಡುವರು ಮರೆಯದೆ!
ನಿಯಮಗಳಾವುವು ಅನ್ವಿಯಸದು ಈ ಮಂದಿಗೆ,
ಗಮನವೆಂದೂ ಇರದು ದೀಪ ಸಂಜ್ನೆಗಳೆಡೆಗೆ!!

ಮೆರೆಯುವರು ದಾರಿಯಲಿ ಅನಾಗರಿಕರ ತೆರದಲಿ,
ಇನಿತೂ ಗೌರವದ ಮಾತಿಲ್ಲ, ಇವರ ನಿಘಂಟಿನಲಿ!
ಇವರೇನು ನಗರದಲಿ ನೆಲೆಸಿರುವ ನಾಗರಿಕರೋ,
ಅಥವಾ ರಸ್ತೆಯನೆಲ್ಲ ಕೊಂಡ ಪಾಳೆಗಾರರೋ?

Tuesday, September 7, 2010

ಹುಡುಗಿಯರ ಸಭ್ಯತೆ


ಹುಡುಗಿಯರು, ಬಟ್ಟೆ ತೊಟ್ಟು ಅರೆಬರೆ,
ಬೆಂಗಳೂರಿನ ರಸ್ತೆಯಲಿ ನಡೆದಾಡುವರು!
ಬಡತನವಿದೆಯೆಂದು ದಯದಲಿ ನೋಡಿದರೆ,
ಸಭ್ಯತೆ ಇಲ್ಲೆಂದು ನಮ್ಮ ಜರಿಯುವರು!!

ನಾಯಿ-ನಾಯಕರು


ಹಾಯಾಗಿ ತಿಂದುಂಡು, ಎಸೆದ ತಂಗಳು,
ಬೆಳೆವರು, ಬೀದಿ ಬೀದಿಯಲಿ ಈ ನಾಯಿಗಳು!
ಹಗಲಿರುಳೆನ್ನದೆ ಬೊಗಳುವರು, ಕಿರುಚುವರು,
ಸದ್ಯ ಬೆಂಗಳೂರಿಗೆ ಇವರೇ ನಾಯಕರು!!

Saturday, September 4, 2010

ಓಲುಮೆ

ಅರಿತೆನೇ ಚೆಲುವೆ ನಿನ್ನಿಂದ,
ಒಲುಮೆ ಎನೆಂದು.
ಮಂಜಿನಲಿ ಧರೆಗಿಣುಕುವ
ಸೂರ್ಯನ ಕಿರಣಗಳೆಂದು,
ವರ್ಣಿಸಲಸದಳ, ಭವ್ಯ ಸುಂದರ,
ತಂಪನೀಯುವ ಪ್ರೇಮ ಸಾಗರ.

ಇದು ಮಬ್ಬಿನಲಿ ಕೈಗೆ ಸೋಕುವ ಇಬ್ಬನಿ,
ಚಿಲಿಪಿಲಿಗುಟ್ಟುವ ಹಕ್ಕಿಗಳ ಮಾರ್ದನಿ,
ಸದ್ದಿಲ್ಲದೆ ಹರಿಯುತಿಹ ಪ್ರೇಮ ತರಂಗಿಣಿ
ಕ್ಷಣದಲಿ ಸೆಳೆವ ಕ್ಷಿಪ್ರ ಸಂಮೋಹಿನಿ.

ಇದು ತಲ್ಲಣಿಸಿ ಸಾಗುತಿಹ ನೀರ ಝರಿ,
ಮನವಿ ಕೊಟ್ಟು ಮಾಡಿಸಿದ ನವಿಲುಗರಿ,
ನಿಂತು ಅರಳುತಿಹ ತಾವರೆಯ ಹೂವು
ಮುತ್ತಿಟ್ಟು ಓಡುತಿಹ ತಂಗಾಳಿಯ ಹರಿವು.

ನೂರಾರು ಭಾವವನು, ಮನಕೆ ಅಪ್ಪಳಿಸಿ,
ಎಲ್ಲವನು ತಾಳ್ಮೆಯಲಿ ಹಿಡಿದು ಸ್ವೀಕರಿಸಿ,
ಮಗುವಂತೆ ಉಡಿಯಲ್ಲಿ ಕಟ್ಟಿ ಸಲಹಿದೆ
ಭಿರುಸು ಕಲ್ಲಿಗೂ ನೀ ಪ್ರೇಮ ಮೂಡಿಸಿದೆ.

---ಮಹಾ

Friday, September 3, 2010

ನಾವು ಹುಡುಗರು, ಅದೇಷ್ಟು ಮೂರ್ಖರು!

ಸಂಗಾತಿ ಸಿಕ್ಕಳೆಂದು,
ಪ್ರೀತಿಯಲ್ಲಿ ಬಿದ್ದೆನೆಂದು
ಖುಷಿಯಲ್ಲಿ ಮೈಯ ಮರೆತು,
ಜಗಕೆಲ್ಲಾ ಸಾರಿ ಹೇಳೋ
ನಾವು ಹುಡುಗರು, ಅದೇಷ್ಟು ಮೂರ್ಖರು!

ಸಂಗಾತಿ ಕರೆದಳೆಂದು,
ಮೈಲುದ್ದ ಸಾಲಲ್ಲಿ ನಿಂತು,
ಚೀಟಿ ಪಡೆದು, ಪಕ್ಕ ಕುಳಿತು,
ಬೋರು ಹೊಡೆಸೋ ಸಿನಿಮಾ ನೋಡೊ,
ನಾವು ಹುಡುಗರು, ಅದೇಷ್ಟು ಮೂರ್ಖರು!

ಸಂಗಾತಿಗೆ ಇಷ್ಟ ಎಂದು,
ದುಬಾರಿ ಹೋಟೆಲ್ಲಿಗೆ ಕರೆದು,
ದುಡ್ಡು ಸುರಿದು,ತಿಂದು ಕುಡಿದು,
ಹುಡುಗಿ ಮನಸ, ಗೆದ್ದೆನೆಂದು, ಬೀಗೊ,
ನಾವು ಹುಡುಗರು, ಅದೇಷ್ಟು ಮೂರ್ಖರು!

ಸಂಗಾತಿ ನುಡಿದಳೆಂದು,
ಕಣ್ಣೀರ ಹರಿಸಿದಳೆಂದು,
ಗಟ್ಟಿಯಾಗಿ ಕೈಯ ಹಿಡಿದು
ಮದುವೆಯಾಗಿ, ಬಂಧಿಯಾಗೋ
ನಾವು ಹುಡುಗರು, ಅದೇಷ್ಟು ಮೂರ್ಖರು!

-----ಮಹಾ,

Thursday, September 2, 2010

ನಮಗೇಕೆ ರಾಜಕಾರಣ--




ನಮಗೇಕೆ ರಾಜಕಾರಣ--
ನಾವೇನು ಕೋಟಿ ಕೋಟಿ ಉಳ್ಳವರೆ,
ಮಾತಿನಲೆ ಮನೆಕಟ್ಟುವ ಛಾತಿಯವರೆ,
ದಿನವೂ ಟೀಕೆಗೆ ಮೈ ಒಡ್ಡುವವರೆ,
ನಾವೇನು ಪುಢಾರಿಗಳ ಚಮಚಾಗಳೇ!

ನಮಗೇಕೆ ರಾಜಕಾರಣ--
ಎಲ್ಲಿಯೂ ಗಣಿ ಇಲ್ಲದ ಮೇಲೆ,
ಬಾರ್ ನಡೆಸುವವರಲ್ಲದ ಮೇಲೆ,
ಒಂದಿಷ್ಟು ಜನರನ್ನು ಕೊಲ್ಲಲಾಗದಿದ್ದರೆ,
ನಾಲಿಗೆ ಸೀಳಿ, ಕತ್ತು ಕೊಯ್ಯಲಾಗದಿದ್ದರೆ!

ನಮಗೇಕೆ ರಾಜಕಾರಣ--
ಕೋಮು, ಜಾತಿ, ಎಲ್ಲ ಬಿಟ್ಟವರಿಗೆ,
ಜನತೆಯ ಕಷ್ಟಗಳಿಗೆ ಮರುಗುವವರಿಗೆ,
ಭ್ರಷ್ಟಾಚಾರದ ವಿರೋಧಿಗಳಿಗೆ,
ನಾಚಿಕೆ ಮಾನ ಮರ್ಯಾದೆ ಬಿಡದವರಿಗೆ!

ನಮಗೇಕೆ ರಾಜಕಾರಣ--
ಇರುವುದೇ ಲೇಸು,
ಮತವ ನೀಡಿ, ಕೊರಗುವ,
ಸಾಮಾನ್ಯ ಪ್ರಜೆಯಾಗಿ,
ಹುಲ್ಲು ತಿಂದು, ಹಾಲು ಕೊಡುವ
ಕೊಟ್ಟಿಗೆಯ ದನವಾಗಿ,

----ಮಹಾ

ಪ್ರೀತಿಯ ಕಾರಣ

ಹುಡುಗ--
ಹೇಳು ಗೆಳತಿ ನಿಜದಿ ಇಂದು,
ನಾನೇನ ಮೋಡಿ ಮಾಡಿದೆ.
ಕಾರು ನಡೆಸೋ ಚಾಲಕ ನಾನು,
ನನ್ನ ಏಕೆ ಪ್ರೀತಿಸಿದೆ!!
ಹುಡುಗಿ--
ಪ್ರೀತಿಯಿಲ್ಲ, ಮೋಡಿಯಿಲ್ಲ,
ದಿನವೂ ನಿನ್ನ ನೋಡಿದೆ!
ಮನೆಯ ಮುಂದೆ ಕಾರು ನೋಡಿ,
ನಿನ್ನವೆಂದೇ ಭಾವಿಸಿದೆ!!

------ಮಹಾ

ಪುಣ್ಯವಂತರು



ಇವರೇ ನೋಡಿ ಜಗದಲಿ ಅತಿ ಪುಣ್ಯವಂತರು,
ಪ್ರತಿ ದಿನವೂ ಬಸ್ಸಿನಲಿ ಸೀಟು ಗಿಟ್ಟಿಸುವವರು!
ಎಲ್ಲರನೂ ನೂಕಿ ಮೊದಲು ಹತ್ತುವ ಇವರು,
ಭುವಿಯಲ್ಲೇ ಸ್ವರ್ಗ, ಅನುಭವಿಸುವವರು!!!

------ಮಹಾ

ಅಪ್ಪನ ಕಿವುಡು

ಅಮ್ಮ ಹೇಳುವಳು, ನನ್ನಪ್ಪ ಕಿವುಡನೆಂದು,
ಮದುವೆಯಾ ನಂತರ ಹೀಗಾಯ್ತೆಂದು!
ನನ್ನ ಮಡದಿಯಿಂದ ನಾ ಅರಿತೆನಿಂದು,
ನಿಜದಿ ನನ್ನಪ್ಪ ಎಷ್ಟು ಬುದ್ಧಿವಂತನೆಂದು!!

------ಮಹಾ

ಮಾವನ ಮನೆ ಸತ್ಕಾರ

ಮಾವನ ಮನೆಯಲಿ ನನಗೆ ಬಹಳ ಸತ್ಕಾರ,
ಕುಳಿತಲ್ಲೆ ಕಾಫಿ ತಿಂಡಿ, ಔತಣ ಭರಪೂರ!
ಅರಿಯುವೆನು ಆಮೇಲೆ ಇಷ್ಟೆಲ್ಲಾ ಯಾಕೆಂದು,
ಮನೆಗೆ ಬೇಗನೆ ಮಗಳ ಕರೆದೊಯ್ಯದಿರಲೆಂದು!!!

------ಮಹಾ

ಅಡುಗೆ ಬಾರದ ಮುಗ್ಧೆ

ಜರಿದೆನು ಮಡದಿಯನು ಅಡುಗೆ ಬಾರದೆಂದು,
ಏನೇನು ಅರಿಯದ ಮುಗ್ಧೆಯೆಂದು!
ಕರೆದಳು ವೈಯಾರದಲಿ ತನ್ನ ಬಳಿಗೆ,
ಈಗ ಪ್ರತಿದಿನವು ನನ್ನದೇ ಅಡುಗೆ!!!

------ಮಹಾ

ಗಂಡನ ಕೆಲಸ

ದಿನವೂ ನೋಡುತ್ತಲಿದ್ದೆ ಬಸ್ಸಿನಲಿ ಅವಳನು,
ಹತ್ತಿರ ಬಂದಳು ಒಂದುದಿನ ಚೆಲ್ಲಿ ನಗುವನು!
ಕೂತ ಸೀಟು ಬಿಟ್ಟುಕೊಟ್ಟೆ ಅವಳಿಗಾಗಿ,
ಈಗ ದಿನವೂ ಸೀಟು ಹಿಡಿಯುವ ಕೆಲಸ
ಅವಳ ಗಂಡನಾಗಿ!!

------ಮಹಾ

ಹುಡುಗಿಯರು

ಹುಡುಗಿಯರೆನು ಅಬಲೆಯರೆ,
ಕೈಲಾಗದ ಕೊಮಲೆಯರೆ!
ನಗುವಿನಲೆ ಹುಡುಗರನು ಕೊಲ್ಲುವಾ ಇವರು
ಶಿಕ್ಷೆಗೆ ನೂಕಲಾಗದ ಕೊಲೆಗಾರರು!!

------ಮಹಾ

ಗೆಳತಿ - ಹೆಂಡತಿ

ಆಗವಳು ನನ್ನ ಗೆಳತಿ,
ಬಹು ತೀಕ್ಷ್ಣಮತಿ, ಬಲು ರೂಪವತಿ!
ಈಗವಳು ನನ್ನ ಹೆಂಡತಿ,
ಮಂದಮತಿ, ಗಜದೇಹದೊಡತಿ!!

------ಮಹಾ

ಹುಡುಗಿಯರ ಮಾತು

ಇಂದಿನ ಹುಡುಗಿಯರು,
ಮಾತಿನಲಿ ಬಲು ಜೋರು!
ಅರಿಯರು ಕಷ್ಟಗಳ ಒಂದಿನಿತು..
ಜರಿವರು ಸಂಸ್ಕೃತಿಯ ಋಣವ ಮರೆತು!!

------ಮಹಾ

ಮಟ್ಕಾ ನಂಬರು

ಹುಡುಕಿದರು, ಕೆದಕಿದರು, ಮಟ್ಕಾದ ನಂಬರು..
ಏನೇನೊ ಲೆಕ್ಕಮಾಡಿ, ಚೀಟಿ ಬರೆದು ಕೊಟ್ಟರು!
ಇರುವುದೆಲ್ಲವ ಬಿಟ್ಟು, ಇರದಿದ್ದುದು ಬಂದು, ತಲೆ ಕೆಡಿಸಿಕೊಂಡು..
ಕೂತ್ಗೋಂಡರು ಮನೆಯಲ್ಲೇ ಮರುದಿನದ ನಂಬರ್ ಹುಡ್ಕೊಂಡು!!

------ಮಹಾ

ಹೆಂಡತಿಯ ಕೋರಿಕೆ

ನನ್ನವಳು ಕೇಳಲಿಲ್ಲ ಇದುವರೆಗೂ, ಒಡವೆ, ಸೀರೆ,
ಇವಳು ಎಂದೂ ಕೇಳಲಿಲ್ಲ, ಬಾನಿನಾ ತಾರೆ....
ಇದುವರೆಗೂ ಇವಳೂ ಕೇಳುವದು ಒಂದೆ
ಸಾಕು ಪ್ರಿಯಾ, ಮಗು ನಮಗೊಂದೆ!!!

------ಮಹಾ

ಹುಡುಗಿಯ ಪ್ರೇಮ

ಹುಡುಗ ಕೇಳಿದ,
ಪ್ರಿಯೆ, ಆಗುವೆಯಾ ನೀ ನನ್ನ ಮದುವೆ?
ಹುಡುಗಿ ಕೇಳಿದಳು,
ಪ್ರಿಯಾ,ನೀನೆಷ್ಟು ಮಾಡಿಸುವೆ ನನಗೆ ಒಡವೆ?
ಹುಡುಗ ಹೇಳಿದ,
ಪ್ರಿಯೆ, ನಾನು ಬಡವ, ಆದರೆ ನಾನು ಹೃದಯದಲಿ ಶ್ರೀಮಂತ..
ಹುಡುಗಿ ಹೇಳಿದಳು,
ಸರಿ ಹಾಗಾದರೆ, ಹುಡುಕಿಕೊ ಕಡುಬಡವಳನು ನಿನಗಿಂತ!!

------ಮಹಾ

ಮಠ

ನಮ್ಮ ಮನೆಯಲಿ ದಿನವೂ ಹೊಡೆದಾಟ,
ಶುರುವಿಗೆ ಕಾರಣ ನನ್ನ ತುಂಟಾಟ,
ಮುಂದುವರಿಸುವದು ಅವಳ ಹಠ,
ಹೀಗಾಗಿ ಸೇರ ಬಯಸಿದ್ದೇನೆ
ಯಾವುದಾದರೂ ಒಳ್ಳೆ ಮಠ!!!
------ಮಹಾ

ನಗುವಿನ ಕಾರಣ

ಏಲ್ಲರೂ ಹೊಗಳಿದರು,
ಹುಡುಗಿ ನಗುನಗುತಿರುವ
ಹಸನ್ಮುಖಿ,
ಹೋಗಿ ನೋಡಿದೆ,
ತಿಳಿಯಿತು ನಗುವಿಗೆ ಕಾರಣ,
ಹಲ್ಲು ಬಾಹ್ಯಮುಖಿ

------ಮಹಾ

ರೋಮಾಂಚನ

ನನ್ನವಳು ನಕ್ಕರೆ,
ನನಗೆ ರೋಮಾಂಚನ!
ಯಾಕೆಂದರೆ
ಅವಳು ನಗುವದು,
ಅಮವಾಸ್ಯೆಗೊಂದೆ ದಿನ!!!

------ಮಹಾ