Thursday, December 23, 2010

ಆಹಾ ಏನು ಚಳಿ!


ಅಹಾ ಈದೇನು ಮೈ ಕೊರೆಯುವ ಚಳಿ
ಹಿಮಾಲಯದ ತಣ್ಣೀರ ಮೈಗೆರೆಚಿದ ಪರಿ
ತನುವೆಲ್ಲಾ ಗಡಗಡನೆ ನಡುಗುತಿದೆ
ಹಾಸಿಗೆಯಲ್ಲೇ ಮುದುಡಿ ಮಲಗುವಂತಾಗಿದೆ

ಬಾನಿಂದ ಭುವಿಗೆ ಬೀಳುತಿಹ ದಟ್ಟ ಮಂಜು
ಪಳಪಳ ಹೊಳೆವ ಕಿರಣಗಳ ಮೋಜು
ಚಿಟಿಪಿಟಿ ಜಿನುಗುತಿಹ ರಸ್ತೆಯಂಚಿನ ಮರ
ಚಳಿಯೇ, ಇದೆಲ್ಲ ನೀ ನಮಗಿತ್ತ ವರ.

ಸುಯ್ ಎನ್ನುತ ಬೀಸುತಿದೆ ನಿನ್ನ ಹೊತ್ತ ಗಾಳಿ
ಕೆರಳುತಿದೆ ಮನಸು ನಿನ್ನ ರೂಪವ ನೋಡಿ
ತಬ್ಬಿ ಏಕೆ ಪೀಡಿಸುತಿಹೆ ಬಿಡು ನನ್ನನ್ನು
ನಲ್ಲೆ ಬರುತಿಹಳು, ಹೋಗಿ, ನಾಳೆ ಬಾ ಇನ್ನು

ಏನು ವರ್ಣಿಸಲಿ ನಿನ್ನ ಚಳಿಯೆ ,
ಕಂಬಳಿಯ ನೆನಪ, ಪದೆಪದೆ ತರುತಿಹೆ,
ಬಿಸಿ ಏರಿಸುವ ಮನಸ ಮೂಡಿಸುತಿಹೆ,
ಪ್ರಿಯತಮೆಯ ಬಂಧನಕೆ ದಿನವೆಲ್ಲಾ ದೂಡುತಿಹೆ.

ಪ್ರಾರ್ಥಿಸುವೆ ಚಳಿಯೆ,ನೀ ನನ್ನ ಜೊತೆಗಿರು
ಕಾಲವನು ದಾಟಿ ನೀ ಎಲ್ಲು ಹೊಗದಿರು,
ಗೊಗರೆವೆ ನಾ ನಿನಗೆ, ನೀ ಅಭಯವ ನೀಡು,
ಚಳಿಯೇ ನೀ, ನಾ ಕರೆದಾಗ ಬಂದುಬಿಡು,

Wednesday, December 22, 2010

ಹೆಂಡತಿಯ ನಗುವ ಬಯಸಿ

ಹೆಂಡತಿಗೆ ತುಸು ಮುನಿಸು ಮೂಡಲು
ತಕ್ಷಣ ಅದನು ಶಮನಗೊಳಿಸಲೇಕೆ,
ಮುದ್ದು ಮುಖದಲ್ಲೆಲ್ಲಾ ಕೆಂಪು ಆವರಿಸಲು
ಇಮ್ಮಡಿಸಿದ ಸೌಂದರ್ಯವ ಸವಿಯಬಾರದೇಕೆ

ಪ್ರೀತಿಯ ನೋಟಕೆ ಹೆಂಡತಿ ತುಸು ನಾಚಲು
ಮುಖ ಹಿಗ್ಗಿಸಿ ಬೀಗುವದೇಕೆ,
ನಾಚಿಕೆಯ ಮುಖಕ್ಕೆ ಕನ್ನಡಿಯ ತೋರಿ
ಕನ್ನಡಿಯನೇ ನಾಚಿಸಬಾರದೇಕೆ

ಹೆಂಡತಿ ಸುಮ್ಮನೆ ಗದರುತಲಿರಲು
ಮುಖವ ಗಂಟಿಕ್ಕಿ ಕೋಪಿಸುವದೇಕೆ
ಕೋಮಲ ಧ್ವನಿಯ ಇಂಪ ಆಲಿಸಿ
ಮುತ್ತುದುರುತೆಂದು ಕರೆದು ತೋರಬಾರದೇಕೆ

ಮನೆಗೆಲಸದಲಿ ಹೆಂಡತಿ ಸಹಾಯ ಬಯಸಲು
ತಾತ್ಸಾರದಲಿ ಅವಳನು ದೂರುವದೇಕೆ
ಸಹನೆಯಲಿ ಅವಳ ಮಾತನು ಪಾಲಸಿ
ಆಯಾಸವೆಂದು ಮಡಿಲಲಿ ಮಲಗಬಾರದೇಕೆ.

ಒಲವಿನ ಹೆಂಡತಿ ಮೌನವಾಗಿರಲು
ಏನಾಗಿ ಹೋಯ್ತೆಂದು ಹಳಹಳಿಸಲೇಕೆ
ನಮ್ಮ ದನಿಯನೂ ಮೌನವಾಗಿಸಿ
ಅವಳ ನೋವಿಗೆ ಸ್ಪಂದಿಸಬಾರದೇಕೆ.

ಹೇಗಿದ್ದರೂ, ಏನಿದ್ದರೂ, ಅವಳ ನಗುವ ಬಯಸಿ,
ಪ್ರತಿಕ್ಷಣವೂ ಅವಳ ಪ್ರೀತಿಸಬಾರದೇಕೆ.....

Thursday, December 16, 2010

ಕನವರಿಕೆ


ನೀನೆಂತ ಪ್ರೀತಿಯ ನೀಡುತಿಹೆಯೇ ಗೆಳತಿ
ಜಗ ಕಾಣದಾಗಿದೆ,
ಯೋಚನೆ ಬರಿದಾಗಿದೆ,
ಅದೇನು ನೀ ಪ್ರೀತಿಸುವ ರೀತಿ,
ಗುರಿಯ ದಾರಿ ಮಸುಕಾಗಿದೆ
ಜೀವ ತಂಪಾಗಿ ಹೋಗಿದೆ

ಮನವ ಬಿಚ್ಚಿದರಲ್ಲಿ, ಸಿಗುವುದೇ
ನಿನ್ನ ಯೋಚನೆಯ ಕಂತೆ,
ನಾಡಿಗಳೆಲೆಲ್ಲ ರಕ್ತ ಹರಿಯುವುದೇ
ನಿನ್ನ ಪ್ರೀತಿಯಾ ಜೊತೆ.
ತಾಳಲಾರೆನು ನಾನು,
ನಾ ಹೊಟ್ಟೆ ತುಂಬಿದ ಜೇನು,
ನಿನ್ನ ಪ್ರೀತಿಯ ಮಧುವಲಿ
ನಾ ಸಿಕ್ಕಿ ಹಾರದಾದೆನು.

ಕಳೆಯುವೆನೆಂದರೂ ನಾ ಹೇಗೆ
ಕಳೆಯಲಿ ಈ ಬಂಧವನು
ತೊರೆಯುವೆನೆನೆಂದರೂ ನಾ ಹೇಗೆ
ತೊರೆಯಲಿ ನನ್ನದೇ ಜೀವವನು
ಬಂಧಿಸಿದೆ, ನರಳಿಸಿದೆ,ಮೋಹವ ಬೆಳೆಸಿದೆ,
ಮುಳುಗಿಸಿದೆ, ತೇಲಿಸಿದೆ, ನನಗೂ
ಪ್ರೀತಿಯ ಸಾಗರದಲಿ ಈಜುವದ ಕಲಿಸಿದೆ.....
ನಾನ್ಯಾರೆಂಬುದೇ ನನಗೆ ಮರೆತು ಹೋಗಿದೆ....