Wednesday, December 22, 2010

ಹೆಂಡತಿಯ ನಗುವ ಬಯಸಿ

ಹೆಂಡತಿಗೆ ತುಸು ಮುನಿಸು ಮೂಡಲು
ತಕ್ಷಣ ಅದನು ಶಮನಗೊಳಿಸಲೇಕೆ,
ಮುದ್ದು ಮುಖದಲ್ಲೆಲ್ಲಾ ಕೆಂಪು ಆವರಿಸಲು
ಇಮ್ಮಡಿಸಿದ ಸೌಂದರ್ಯವ ಸವಿಯಬಾರದೇಕೆ

ಪ್ರೀತಿಯ ನೋಟಕೆ ಹೆಂಡತಿ ತುಸು ನಾಚಲು
ಮುಖ ಹಿಗ್ಗಿಸಿ ಬೀಗುವದೇಕೆ,
ನಾಚಿಕೆಯ ಮುಖಕ್ಕೆ ಕನ್ನಡಿಯ ತೋರಿ
ಕನ್ನಡಿಯನೇ ನಾಚಿಸಬಾರದೇಕೆ

ಹೆಂಡತಿ ಸುಮ್ಮನೆ ಗದರುತಲಿರಲು
ಮುಖವ ಗಂಟಿಕ್ಕಿ ಕೋಪಿಸುವದೇಕೆ
ಕೋಮಲ ಧ್ವನಿಯ ಇಂಪ ಆಲಿಸಿ
ಮುತ್ತುದುರುತೆಂದು ಕರೆದು ತೋರಬಾರದೇಕೆ

ಮನೆಗೆಲಸದಲಿ ಹೆಂಡತಿ ಸಹಾಯ ಬಯಸಲು
ತಾತ್ಸಾರದಲಿ ಅವಳನು ದೂರುವದೇಕೆ
ಸಹನೆಯಲಿ ಅವಳ ಮಾತನು ಪಾಲಸಿ
ಆಯಾಸವೆಂದು ಮಡಿಲಲಿ ಮಲಗಬಾರದೇಕೆ.

ಒಲವಿನ ಹೆಂಡತಿ ಮೌನವಾಗಿರಲು
ಏನಾಗಿ ಹೋಯ್ತೆಂದು ಹಳಹಳಿಸಲೇಕೆ
ನಮ್ಮ ದನಿಯನೂ ಮೌನವಾಗಿಸಿ
ಅವಳ ನೋವಿಗೆ ಸ್ಪಂದಿಸಬಾರದೇಕೆ.

ಹೇಗಿದ್ದರೂ, ಏನಿದ್ದರೂ, ಅವಳ ನಗುವ ಬಯಸಿ,
ಪ್ರತಿಕ್ಷಣವೂ ಅವಳ ಪ್ರೀತಿಸಬಾರದೇಕೆ.....

No comments:

Post a Comment