Saturday, August 28, 2010

ಕವಿತೆ

ನನ್ನವಳು
ಬರೆದು ಬರೆದು ಪ್ರೇಮ ಕವಿತೆ,
ನನ್ನವಳಿಗೆ ನೀಡಿದೆ.
ಹೇಳಿದಳವಳು ಅಲ್ಲಿ ಕುಳಿತೆ,
ನಿಜದಿ ಹುಚ್ಚು ಏರಿದೆ!!

ಧನವಂತ
ನನ್ನ ಮಾವ ಬಹಳ ಶ್ರೀಮಂತ,
ನನ್ನ ಮದುವೆಗೂ ಮೊದಲು!
ನಾ ಅವನನೂ ಮೀರಿಸಿದ ಧನವಂತ
ಕಾರಣ ಅವನ ಮಗಳು!!!

ಊಡುಗೊರೆ
ಮಾವನ್ ಮನೆಗೆ ಹೆಂಡ್ತಿನ್ ಕರ್ಕೊಂಡ್
ಹೋಗೊಕೆ ನನಗೆ ಬಹಳಾ ತೊಂದರೆ!
ಮರೀತಿನ್ ಕಷ್ಟನೆಲ್ಲಾ, ನೆನ್ಸ್ಕೊಂಡ್,
ಮಾವಾ ಕೊಡೊ ಉಡುಗೊರೆ!!!!
--ಮಹಾ

Thursday, August 26, 2010

ನಾನೇನ ಅರ್ಪಿಸಲಿ?

ಭುವಿಗೆ ಬೀಳುತಲೆ ತಬ್ಬಿ ಹಿಡಿದು
ರಚ್ಚೆ ಹಿಡಿಯುತಲೆ ಕಣ್ಣ ತೆರೆದು
ಎದೆಗೆ ಅವುಚಿ ಹಾಲು ಕುಡಿಸಿದ
ಅಮ್ಮನಿಗೆ ನಾನೇನ ಅರ್ಪಿಸಲಿ?

ಮಲಗಿದಲ್ಲೆ ಬೋರಲು ಬೀಳಿಸಿ
ದೂರದಲ್ಲಿ ಆಟಿಕೆ ಇಡಿಸಿ
ಅಂಬೆ ಹರಿಸಿ, ಸಂಭ್ರಮಿಸಿದ
ಅಮ್ಮನಿಗೆ ನಾನೇನ ಅರ್ಪಿಸಲಿ?

ಹೆಜ್ಜೆ ಮೇಲೆ ಹೆಜ್ಜೆ ಇಟ್ಟು
ನಡೆವಾಗ ನಾನು ಕಷ್ಟಪಟ್ಟು
ಬೀಳದಂತೆ ಆಸರೆ ನೀಡಿದ
ಅಮ್ಮನಿಗೆ ನಾನೇನ ಅರ್ಪಿಸಲಿ?

ಮಾತು ಬರದೆ ತೊದಲುವಾಗ
ಮಣ್ಣ ತಿಂದು ತೇಗುವಾಗ
ಬರಸೆಳೆದು ಹಣೆಗೆ ಮುತ್ತನಿಕ್ಕಿದ
ಅಮ್ಮನಿಗೆ ನಾನೇನ ಅರ್ಪಿಸಲಿ?

ಗೆಳಯರೊಡನೆ ಆಡುತಿರಲು
ತಿಂಡಿ ತಿನಿಸು ಬೇಡುತಿರಲು
ಗದರಿ ಶಾಲೆಗೋಗು ಎಂದ
ಅಮ್ಮನಿಗೆ ನಾನೇನ ಅರ್ಪಿಸಲಿ?

ಹಸಿದು ಬಂದ ನನಗೆ ಬಡಿಸಿ
ತನಗೆ ತಿಳಿದ ವಿದ್ಯೆ ಕಲಿಸಿ
ಸುಖ ಜೀವನಕ್ಕೆ ದಾರಿ ತೋರಿದ
ಅಮ್ಮನಿಗೆ ನಾನೇನ ಅರ್ಪಿಸಲಿ?

---ಮಹಾ

Wednesday, August 25, 2010

ಗೆಳತಿಯಾ ನೆನಪು

ಕನಸಾಯಿತು, ಕಳೆದು ಹೋಯಿತು,
ಮನದ ದುಗುಡ ನಿಜವಾಯಿತು.
ಬಂಧ ಹರಿಯಿತು ಮನ ಮಿಡಿಯಿತು
ಗಾಢ ಕತ್ತಲೆಗೆ ಮನವು ಸರಿಯಿತು.

ಬಂದೆ ಬಾಳಲಿ ಬೆಳದಿಂಗಳಂತೆ.
ಚಪ್ಪರದಲಿ ಇಣುಕುವ ಕಿರಣದಂತೆ
ಕುಡಿಯೊಡೆದಿತ್ತು ಹರುಷದ ನವ ಬಾಳು
ಕನಸು ಗರಿಗೆದರಿ ಮುಟ್ಟಿತ್ತು ಮುಗಿಲು.

ಉಸಿರು ಬಿಸಿ, ಮನದ ತವಕ,
ಸಂದೇಶಕೆ ಕಾಯುವದೆ ನಿತ್ಯ ಕಾಯಕ
ಮನದಾಳದಿ ಬೆಳೆದಿತ್ತು ಬೆಟ್ಟದಷ್ಟು ಪ್ರೀತಿ
ಅದುಮಲಾಗದೆ ಹೋಯ್ತು ಮನದ ಭೀತಿ.

ದೂರಾದೆ ಒಂದಿನಿತು ಕರುಣೆ ಇಲ್ಲದೆ,
ತೊರೆದೆ ಸಂಪರ್ಕಗಳ ಕಾರಣ ಕೊಡದೆ
ಸುಡುತಿದೆ ಒಡಲ ಪ್ರೀತಿಯಾ ಚಿತೆ
ನಾ ಹೇಳದಾದೆ...
ನೀ ಏಕೆ ಅರಿಯದಾದೆ?.....

----ಮಹಾ
ಪ್ರೀತಿ - ಯುದ್ಧ

ಪ್ರೀತಿ ಜಯಿಸಲಾಗದ ಮಹಾ ಯುದ್ಧ
ಜನಿಸುವಾಗಲೆ ಇದಕೆ ಮರಣ ಶತಃಸಿದ್ದ
ಪ್ರೀತಿಸಲೇ ಬಾರದು ನಾವೆಂದೆಂದು ಮನಕೊಟ್ಟು
ಬಿಡಬಾರದು ಹೃದಯಕ್ಕೆ ಯಾರನ್ನೂ ಮತಿಗೆಟ್ಟು.

ಪ್ರೀತಿ - ಹೇಗೆ?

ಹೇಳು ಗೆಳತಿ ನಾ ನಿನ್ನ ಹೇಗೆ ಪ್ರೀತಿಸಲಿ!
ಒಡೆದೋದ ಹೃದಯದಲಿ ನಿನ್ನ ಹೇಗೆ ಕೂರಿಸಲಿ!
ಇನ್ನೆಷ್ಟು ಪ್ರೀತಿಸಲಿ ಈ ನಿತ್ರಾಣ ದೇಹದೆಲೆ!
ಯೊಚಿಸಬೇಕಾಗಿತ್ತು ಗೆಳತಿ ಚೂರಿಯಿಕ್ಕುವ ಮೊದಲೆ!!

ಪ್ರೀತಿ - ಹೃದಯ

ಪ್ರೀತಿಸಿದೆನೇ ನನೊಂದು ಮುಳ್ಳು ಹೃದಯವನು!
ಸೌಂದರ್ಯ ಲೇಪನದ ಕಲ್ಲು ಮೂರ್ತಿಯನು!
ಪ್ರೀತಿ ಮಾಯೆ ಎಂಬುದ ಅರಿಯದಾ ನಾನು
ಉರಿವ ಬೆಂಕಿಗೆ ದೂಡಿದೆನೇ ಈ ಜೀವನವನು!!

ಪ್ರೀತಿ - ನೋವು

ನನ್ನೊಲವು ಎಷ್ಟೆಂದು ನಾ ಹೇಗೆ ವರ್ಣಿಸಲಿ
ನಿನಗೆಂದೆ ತೆಗೆದಿಟ್ಟ ಈ ನನ್ನ ಜೀವದಲಿ
ಪ್ರೀತಿಸಿದೆ ನಿನ್ನನ್ನೇ ಪರಿಪೂರ್ಣ ಮನಸಿನಲಿ
ಗೆಳತೀ
ಏನು ಸುಖ ಕಂಡೆ ನನ್ನ ನೋಯುಸುವಲ್ಲಿ!!

ಪ್ರೀತಿ - ಮಾಯೆ

ನಡೆನಡೆದೆ ಪ್ರೀತಿಸಲು ಮಾಯಾದಾರಿಯಲಿ!
ಹಿಂದಿರುಗಿ ನೋಡದೆಲೆ ಒಂದೆ ಉಸಿರಿನಲಿ!
ಸಿಕ್ಕಂತೆ ಭಾಸ ಪ್ರತಿ ಹೆಜ್ಜೆ ಇಡುವಾಗಲು!
ಅರಿತೆನೀಗ ಇದು ಕೈಗೆಟುಕದಾ ಕೆಂಬಣ್ಣದ ಬಿಸಿಲು!!

ಮಾತು - ಧ್ಯಾನ

ನಾವ್ ನುಡಿದಾ ಮಾತು ಹೆಚ್ಚೆಂದು ಕಂಡಾಗ
ಮೌನದಲೆ ಇರುವುದು ಲೇಸೆನ್ನ ಬೇಕು!
ಪ್ರೀತಿ ಹುಚ್ಚೆದ್ದು ಮಿತಿ ಮೀರಿದಾಗ
ಧ್ಯಾನದೆಲೆ ಮನಸನ್ನು ಕಳೆದು ಬಿಡಬೇಕು!!

-----maha

ಇದೆನಾ ಬಹುಮಾನ!

ಕಳೆಯಿತೇ ಪ್ರೀತಿಯಾ ಆ ಕ್ಷಣಗಳು
ಸಡಿಲಾಯಿತೇ ಅಪ್ಪುಗೆಯ ಆ ಬಂಧಗಳು!
ಮುಗಿಯಿತೇ ಚೆಲ್ಲಾಟದ ಆ ದಿನಗಳು!
ಬಾಡಿತೆ ನಾ ಕೊಟ್ಟ ಎಲ್ಲ ಹೂವುಗಳು!!

ನಿನ್ನೇ ಪ್ರೀತಿಸಿದೆ, ಅನುಕ್ಷಣವು, ಅನುದಿನವು,
ಅರ್ಪಿಸಿದೆ ನನ್ನನ್ನೇ, ನಿನದೆ ಈ ಜೀವನವು,
ಮಾತಿನಲಿ ಮೌನದಲಿ ಎಲ್ಲೆಲ್ಲು ನೀನೆ,
ಎಲ್ಲದಕೂ ನೀನಿಂದು ಮಾಡಿದೆಯಾ ಕೊನೆ!!

ಎಲ್ಲಿ ಆ ಸಂದೇಶಗಳು, ತೇಲುವಾ ಮುತ್ತುಗಳು!
ಎಲ್ಲಿ ಬಿಗಿದಪ್ಪಿದಾ ಆ ಕೋಮಲ ಕೈಗಳು!
ಎಲ್ಲಿ ತಂಗಾಳಿ ನೀಡಿದ ಆ ಉಪವನಗಳು!
ಎಲ್ಲಿ ಕಿವಿಗುಸುರಿದ ಪ್ರೇಮದ ಅಣಿಮುತ್ತುಗಳು!!

ಬೇಡವಾಯಿತೇ ಇಂದು ನನ್ನ ಸಾಂಗತ್ಯ!
ಮುಗಿಸಿವೆಯಾ ನಮ್ಮೀರ್ವರ ಪ್ರೇಮ ದಾಂಪತ್ಯ!
ರುಚಿಸದಾಯಿತೇ ನಾ ಹೇಳುವ ಹಿತಮಾತುಗಳು!
ಹಿಡಿಸದಾಯಿತೇ ನಾ ಓದುವ ಪ್ರೇಮ ಕವನಗಳು!!

ಕಲ್ಲಾಯಿತೇ ಗೆಳತಿ ನಿನ್ನ ಕೋಮಲ ಹ್ರದಯ!
ಅರಿಯೆಯಾ ಒಡಲೊಳಗೆ ನೀ ಮಾಡಿದಾ ಗಾಯ!!
ಬಿಡಬಾರದೆ ನನಗಾಗಿ ಆ ನಿನ್ನ ಬಿಗುಮಾನ!
ಅತಿಯಾಗಿ ಪ್ರೀತಿಸಿದ್ದಕ್ಕಾಗೆನಾ ಈ ಬಹುಮಾನ!!

----ಮಹಾ

Tuesday, August 24, 2010

ನನ್ನ ಹೆಂಡತಿಯ ಅಡುಗೆ

ಯಾರ್ಯಾರು ಸವಿದಾರು ಈ ಬಗೆಯ ಪಾಕವನು!
ಜೊಲ್ಸುರಿಸಿ ಚಪ್ಪರಿಸೋ ಬಗೆಬಗೆಯ ಖಾದ್ಯವನು!!
ಸವಿಸವಿದು ತೇಗುವಾ ಭಾಗ್ಯ ನನಗೊಬ್ಬನಿಗೇ!
ನಾ ಹೇಗೆ ಹೊಗಳಲಿ ನನ್ನ ಹೆಂಡತಿಯ ಅಡುಗೆ?

ಮುಂಜಾನೆ ನಾನೆದ್ದು ತಿಂಡಿಯಾ ನೆನೆಸೆ!
ಕೈಗಿಡುವಳು ಆರೇಳು ನೀರಿನಾ ದೋಸೆ.!!
ಹಾಲು ಕೈಗಿತ್ತು ಕೇಳುವಳು ಆಸ್ರೀಗೆ ಹೇಗೆ?
ನಾ ಏನು ಹೊಗಳಲಿ ನನ್ನ ಹೆಂಡತಿಯ ಅಡುಗೆ?

ಮುದ್ಮುದ್ದೆ ಚಿತ್ರನ್ನ, ಪುಳಿಯೊಗರೆ ಪಲಾವು,
ಪ್ರತಿದಿನವು ಹೊಸ ರುಚಿಯ ಅನುಭವವು
ಅನ್ನ ಮೊಸರು, ಸಾರು ಮಧ್ಯಾಹ್ನಕೆ, ರಾತ್ರಿಗೆ,
ನಾ ಹೇಗೆ ವರ್ಣಿಸಲಿ ನನ್ನ ಹೆಂಡತಿಯ ಅಡುಗೆ?

ಸೀದೋದ ಓಗ್ಗರಣೆ, ಅರೆಬೆಂದ ಪಲ್ಯ,
ನೆನಪಿಸುವಳು ದಿನವೂ ಉಪ್ಪಿನಾ ಮೌಲ್ಯ
ಜಾಮೂನು, ಪಾಯಸ, ಒಮ್ಮೊಮ್ಮೆ ನಾಲಿಗೆಗೆ
ಎನಿತು ವರ್ಣಿಸಲಿ ನನ್ನ ಹೆಂಡತಿಯ ಅಡುಗೆ?

ನಗುನಗುತ ಬಡಿಸುವಳು ಬಲು ಪ್ರೀತಿಯಲಿ
ಮರೆಯುವೆನು ಜಗವೆಲ್ಲ ಇವಳ ಸನಿಹದಲಿ
ಸರಿಸಾಟಿ ಏನುಂಟು ನನ್ನವಳ ಒಲವಿಗೆ?
ನಾ ಹೇಗೆ ಹೊಗಳಲಿ ಇವಳ ಪ್ರೀತಿಯಾ ಬಗೆ?

Monday, August 2, 2010

ನೆನಪುಗಳ ತುಣುಕು

ನೆನಪಾಗುತಿದೆ ಗೆಳತಿ ನಮ್ಮಿಬ್ಬರ ಆ ಮಿಲನ
ನಸುನಾಚಿ ತಂದಿಟ್ಟ ಆ ಭಾರಿ ಔತಣ,
ಕಡೆಗಣ್ಣಿನಲೆ ನನ್ನ ನೋಡಲು ಕಾತರಿಸಿದ ಆ ಕಣ್ಣು
ಬಂಧಿಸಿದೆ ಆ ನೋಟದಲೆ ಈ ನನ್ನ ಮನಸನ್ನು.

ನಡೆದಿತ್ತು ನೆಂಟರದು ಏನೇನೊ ಸಂವಾದ
ಕ್ಷಣ ಕ್ಷಣಕೂ ಏರುತ್ತಿತ್ತು ನನ್ನೆದೆಯ ನಿನಾದ.
ತೋರಿದರು ಇಬ್ಬರಿಗೂ ಮಹಡಿಯಾ ದಾರಿ
ಅಳುಕುತಲೆ ಮುನ್ನಡೆದೆ ಮೆಟ್ಟಿಲನು ಏರಿ.

ಎಗ್ಗಿಲ್ಲದೆ ಸಾಗಿತು ನನ್ನ ಪರಿಚಯ ಭಾಷಣ
ನಿನ್ನದೋ ಚುಟುಕು ಉತ್ತರ, ಆಮೇಲೆ ಬರೀ ಮೌನ.
ತೆರಿದಿಟ್ಟೆ ನನ್ನೆಲ್ಲಾ ಜೀವನದ ಆಸೆ
ಸುಖಬಾಳು ಬಯಸಿದ ನಿನಗಿತ್ತೆ ಭಾಷೆ.

ನಂತರದ್ದೆಲ್ಲಾ ಮಧುರಾತಿ ಮಧುರ
ಮನ ತುಂಬಿ, ಮನ ಬೆಳಗಿ, ನನಗಿತ್ತೆ ಉಸಿರ.
ಭಾವ ತುಂಬಿದೆ, ನಿನ್ನೊಡನೆ ಬಾಳ ಮುನ್ನಡೆಸುವ
ಭುವಿಯಲ್ಲೆ ನೀಡಿದೆ, ಸ್ವರ್ಗದನುಭವವ.

--ಮಹಾ